ಸಂಸದರಿಗೆ ಇತರ ವೃತ್ತಿಗಳನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ

Update: 2017-04-02 12:22 GMT

ಹೊಸದಿಲ್ಲಿ,ಎ.2: ಸಂಸದರು ಇತರ ಯಾವುದೇ ವೃತ್ತಿಯಲ್ಲಿ ತೊಡಗುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು, ಅರ್ಜಿದಾರರು ಎತ್ತಿರುವ ವಿಷಯವು ಸಿಂಧುವೇ ಆಗಿದೆಯಾದರೂ ಸಂವಿಧಾನದ 32ನೇ ವಿಧಿಯಡಿ ಅದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದೆ.

ಅರ್ಜಿದಾರರು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದಾರೆ ಮತ್ತು ಅವರು ಸರಿಯಾದ ವಿಷಯವನ್ನೇ ಎತ್ತಿದ್ದಾರಾದರೂ ಈ ಸಂಬಂಧ ನ್ಯಾಯಾಲಯವು ಯಾವುದೇ ನೀತಿಯನ್ನು ರೂಪಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಡಿ.ವಿ.ಚಂದ್ರಚೂಡ್ ಅವರ ಪೀಠವು ಹೇಳಿತು.

ಐಎಎಸ್ ಅಧಿಕಾರಿಗಳಾಗಿರುವ ವೈದ್ಯರಿದ್ದಾರೆ, ರಾಜತಾಂತ್ರಿಕರಾಗಿರುವ ಇಂಜಿನಿಯರ್‌ಗಳಿದ್ದಾರೆ. ನೀವೂ ಸಹ ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದೀರಿ ಎಂದು ನ್ಯಾಯಾಲಯವು ಅರ್ಜಿದಾರ ನ್ಯಾಯವಾದಿ ಹಾಗೂ ಬಿಜೆಪಿ ವಕ್ತಾರ ಅಶ್ವಿನಿಕುಮಾರ ಉಪಾಧ್ಯಾಯ ಅವರನ್ನುದ್ದೇಶಿಸಿ ಹೇಳಿತು.

 ಇತರ ಯಾವುದೇ ವೃತ್ತಿಗಳಲ್ಲಿ ತೊಡಗದಂತೆ ನ್ಯಾಯಧೀಶರು ಮತ್ತು ಸರಕಾರಿ ನೌಕರರಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಕಾನೂನು ರೂಪಕರಿಗೂ ಅನ್ವಯಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ ಉಪಾಧ್ಯಾಯ,ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಐವರು ಸಂಸದರು ತನ್ನ ಕಣ್ಣಿಗೆ ಬಿದ್ದಿದ್ದಾರೆ. ಅವರು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಹಾಜರಾತಿ ಹಾಕಿ ಇಲ್ಲಿಗೆ ಬಂದಿದ್ದಾರೆ ಎಂದು ಬೆಟ್ಟು ಮಾಡಿದರು.

ನಿಮ್ಮ ವಾದವೇನೋ ಸರಿಯಾಗಿದೆ, ಆದರೆ ನಾವು ನೀತಿಗಳನ್ನು ರೂಪಿಸುವುದು ಹೇಗೆ ಎಂದು ಪೀಠವು ಪ್ರಶ್ನಿಸಿತು.

ಒಕ್ಕೂಟ ವ್ಯವಸ್ಥೆಯಲ್ಲಿ ಸಂಸದರು ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿರುವುದರಿಂದ ಅವರು ಪ್ರತಿದಿನ ಸಂಸತ್ತಿಗೆ ಹಾಜರಾಗಬೇಕು ಮತ್ತು ಜನರ ಏಳಿಗೆಗಾಗಿ ಪೂರ್ಣಕಾಲಿಕವಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News