ಎಪ್ರಿಲ್ ಫೂಲ್ ಚೇಷ್ಟೆಗೆ ಬಲಿಯಾದ ಪಾಕ್ ಮಾಜಿ ಸಚಿವ

Update: 2017-04-02 16:00 GMT

ಇಸ್ಲಾಮಾಬಾದ್, ಎ. 2: ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ರೆಹಮಾನ್ ಮಲಿಕ್ ‘ಎಪ್ರಿಲ್ ಫೂಲ್’ ಚೇಷ್ಟೆಗೆ ಬಲಿಯಾದ ಘಟನೆಯೊಂದು ಶನಿವಾರ ವರದಿಯಾಗಿದೆ. ಇಸ್ಲಾಮಾಬಾದ್‌ನ ನೂತನ ವಿಮಾನ ನಿಲ್ದಾಣಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಹೆಸರು ಇಡುವುದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿ ಅವರು ಮೂರ್ಖರಾದರು.

‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಯು ಎಪ್ರಿಲ್ ಫೂನ್ ದಿನದ ಚೇಷ್ಟೆಯ ಭಾಗವಾಗಿ ತನ್ನ ವೆಬ್‌ಸೈಟ್‌ನಲ್ಲಿ ಶನಿವಾರ ಬೆಳಗ್ಗೆ, ರಾಜಧಾನಿಯ ನೂತನ ವಿಮಾನ ನಿಲ್ದಾಣಕ್ಕೆ ಚೀನಾ ಅಧ್ಯಕ್ಷರ ಹೆಸರನ್ನು ಇಡಲು ಸರಕಾರ ನಿರ್ಧರಿಸಿದೆ ಎಂಬ ಸುದ್ದಿಯನ್ನು ಪ್ರಕಟಿಸಿತು.

ಗಂಟೆಗಳ ಬಳಿಕ ಮಲಿಕ್ ಈ ಸುದ್ದಿಗೆ ಗಂಭೀರವಾಗಿ ಪ್ರತಿಕ್ರಿಯಿಸಿದರು. ಈಗಾಗಲೇ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಮಾಜಿ ಮುಖ್ಯಸ್ಥೆ ದಿವಂಗತ ಬೇನಝಿರ್ ಭುಟ್ಟೊ ಅವರ ಹೆಸರನ್ನು ಇಡಲಾಗಿದ್ದು, ಸರಕಾರದ ನಿರ್ಧಾರಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಲು ಸರಕಾರ ಪ್ರತಿಕ್ರಿಯಿಸಿದರೆ ತನ್ನ ಪಕ್ಷವು ತೀವ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
‘‘ಸಾರ್ವಜನಿಕರ ಭಾವನೆಗಳನ್ನು ನೋಯಿಸಬಹುದಾದ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬಾರದು’’ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಮಲಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News