ಮಿಲಿಟರಿ ಮುಖ್ಯಸ್ಥರೊಂದಿಗೆ ಇರಾಕ್‌ಗೆ ಭೇಟಿ ನೀಡಲಿರುವ ಟ್ರಂಪ್ ಹಿರಿಯ ಸಲಹೆಗಾರ ಜಾರೆಡ್ ಕುಶ್ನೆರ್
ವಾಷಿಂಗ್ಟನ್ , ಎ.3: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಹಿರಿಯ ಸಲಹೆಗಾರ ಜಾರೆಡ್ ಕುಶ್ನೆರ್ ಅವರು ಮಿಲಿಟರಿ ಮುಖ್ಯಸ್ಥರಾದ ಜನರಲ್ ಜೋಸೆಫ್ ಡುನ್ಫರ್ಡ್ ಅವರೊಂದಿಗೆ ಇರಾಕ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇರಾಕ್ ಪರಿಸ್ಥಿತಿಯನ್ನು ಸ್ವತಃ ಪರಾಮರ್ಶಿಸಲು ಬಯಸಿರುವ ಕುಶ್ನೆರ್ ಇರಾಕ್ ಸರಕಾರಕ್ಕೆ ಬೆಂಬಲ ತೋರಿಸುವ ಇರಾದೆ ಹೊಂದಿದ್ದಾರೆನ್ನಲಾಗಿದೆ. ಆದರೆ ಇರಾಕ್ ಆಡಳಿತದೊಂದಿಗೆ ಕುಶ್ನೆರ್ ಹಾಗೂ ಜನರಲ್ ಜೋಸೆಫ್ ನಡೆಸಲಿರುವ ಗೌಪ್ಯ ಸಭೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲವಾಗಿದೆ.
ಅಧ್ಯಕ್ಷರ ಸಿಬ್ಬಂದಿ ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕುಶ್ನೆರ್ ಇತ್ತೀಚೆಗಷ್ಟೇ ಸರಕಾರವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಕಾರ್ಯಪಡೆಯೊಂದನ್ನೂ ರಚಿಸಿದ್ದು ಅಧ್ಯಕ್ಷರಿಗೆ ಪರೋಕ್ಷಾಗಿ ಮಧ್ಯ ಪೂರ್ವ, ಕೆನಡಾ, ಮೆಕ್ಸಿಕೋ ಮತ್ತಿತರ ದೇಶಗಳೊಡನೆಯ ಸಂಬಂಧಗಳ ಬಗ್ಗೆ ಸಲಹೆಗಳನ್ನೂ ನೀಡುತ್ತಿದ್ದಾರೆ.
ರಾಜತಾಂತ್ರಿಕತೆಯಿಲ್ಲ ಯಾವುದೇ ಪೂರ್ವಾನುಭವವನ್ನು ಹೊಂದಿರದೇ ಇರುವ ಹೊರತಾಗಿಯ ಟ್ರಂಪ್ ಅವರು ಇಸ್ರೇಲ್ ಮತ್ತು ಫೆಲೆಸ್ತೀನ್ ಜತೆ ಶಾಂತಿ ಸ್ಥಾಪಿಸುವ ಕಾರ್ಯವನ್ನು ಕುಶ್ನೆರ್ ಗೆ ವಹಿಸಿದ್ದರು.
ಕುಶ್ನೆರ್ ಅವರು ಟ್ರಂಪ್ ಅವರ ಹಿರಿಯ ಪುತ್ರಿ ಇವಾಂಕ ಅವರ ಪತಿಯಾಗಿದ್ದು ಈ ವಾರದಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಫ್ಲೊರಿಡಾದ ಪಾಮ್ ಬೀಚ್ ನಲ್ಲಿ ನಡೆಯವು ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆಂದು ಹೇಳಲಾಗುತ್ತಿದೆ.
ರಷ್ಯ ಜತೆ ಡೊನಾಲ್ಡ್ ಟ್ರಂಪ್ ಅವರಿಗೆ ಇರುವ ಸಂಬಂಧಗಳ ಬಗ್ಗೆ ನಡೆಸಲಾಗುತ್ತಿರುವ ತನಿಖೆಯ ಪರಿಧಿಯೊಳಗೆ ಕುಶ್ನೆರ್ ಅವರನ್ನೂ ಇತ್ತೀಚೆಗೆ ಸೇರಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.