ವಿಮಾನ ನಿಲ್ದಾಣದ ರನ್-ವೇ ಯಲ್ಲಿ ಕಾಣಿಸಿಕೊಂಡ ಚಿರತೆ
Update: 2017-04-03 12:57 IST
ಕಾಠ್ಮಂಡು,ಎ.03 : ರಾಜಧಾನಿ ಕಾಠ್ಮಂಡುವಿನಲ್ಲಿರುವ ನೇಪಾಳದ ಏಕೈಕ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್-ವೇ ಯಲ್ಲಿ ಸೋಮವಾರ ಚಿರತೆಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಸ್ವಲ್ಪ ಸಮಯ ಮುಚ್ಚಬೇಕಾದ ಅನಿವಾರ್ಯತೆ ಎದುರಾಯಿತು. ವಿದೇಶಿ ಹಾಗೂ ದೇಶೀಯ ವಿಮಾನ ಸೇವೆಗಳು ಇದರಿಂದ ವ್ಯತ್ಯಯಗೊಂಡವು.
ಸ್ಥಳಕ್ಕೆ ಕೂಡಲೇ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳನ್ನು ಕರೆಸಿ ಚಿರತೆ ಅಡಗಿಕೊಂಡಿದೆಯೆನ್ನಲಾದ ಮಳೆ ನೀರ ಕಾಲುವೆಯೊಂದನ್ನು ಮುಚ್ಚಲಾಯಿತು. ಸುಮಾರು ಒಂದು ಗಂಟೆಯ ನಂತರ ವಿಮಾನ ನಿಲ್ದಾಣವನ್ನು ತೆರೆಯಲಾಯಿತಾದರೂ ಚಿರತೆ ಪತ್ತೆಯಾಗಿಲ್ಲ.
ತರುವಾಯ ಚಿರತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣ ನಗರ ಪ್ರದೇಶದಲ್ಲಿದ್ದರೂ ಅದರ ಉತ್ತರ ಭಾಗದಲ್ಲಿ ಸ್ವಲ್ಪ ಅರಣ್ಯ ಪ್ರದೇಶವಿದೆ.