ಬೆಂಗಳೂರಿನ ಐಐಎಸ್‌ಸಿ ದೇಶದ ನಂ.1 ವಿವಿ
ಹೊಸದಿಲ್ಲಿ,ಎ.3: ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳ ಗುಣಮಟ್ಟದ ರೇಟಿಂಗ್ ಕುರಿತಾದ ಸರಕಾರಿ ವರದಿ ‘ ಇಂಡಿಯಾ ರ್ಯಾಂಕಿಂಗ್ಸ್ 2017’ ಸೋಮವಾರ ಬಹಿರಂಗಗೊಂಡಿದ್ದು, ಅಚ್ಚರಿಯೆಂಬಂತೆ ಅಷ್ಟೇನೂ ಖ್ಯಾತಿ ಪಡೆದಿರದ ದಿಲ್ಲಿಯ ‘ಮಿರಾಂಡಾ ಹೌಸ್’ ಮಹಿಳಾ ಕಾಲೇಜ್ ತನ್ನ ಸಮಕಾಲೀನ ಕಾಲೇಜುಗಳಾದ ದಿಲ್ಲಿಯ ‘ಲೇಡಿ ಶ್ರೀರಾಮ್ ಕಾಲೇಜ್’, ಮದ್ರಾಸ್‌ನ ‘ಲೊಯೇಲಾ ಕಾಲೇಜ್’ ಹಾಗೂ ‘ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್’ನ್ನು ಹಿಂದಿಕ್ಕಿ, ದೇಶದಲ್ಲೇ ನಂ.1 ಕಾಲೇಜ್ ಎನಿಸಿದೆ.
ವಿಶ್ವವಿದ್ಯಾನಿಲಯಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್‌ಸಿ) ಮೊದಲನೇ ಸ್ಥಾನದಲ್ಲಿದ್ದು, ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಕೂದಲೆಳೆಯ ಅಂತರದಲ್ಲಿ ಎರಡನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಸಂಸತ್‌ಭವನ ದಾಳಿ ಪ್ರಕರಣದ ದೋಷಿ ಅಫ್ಧಲ್ ಗುರುವಿನ ಮರಣದಂಡನೆ ಯನ್ನು ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶದ್ರೋಹಿ ಘೋಷಣೆಗಳು ಕೂಗಿದ ಆರೋಪ ಹಾಗೂ ವಿದ್ಯಾರ್ಥಿಯೊಬ್ಬನ ನಿಗೂಢ ನಾಪತ್ತೆ ಪ್ರಕರಣ ಸೇರಿದಂತೆ ವಿವಿಧ ವಿವಾದಗಳಿಗೆ ತುತ್ತಾಗಿದ್ದ ಜೆಎನ್‌ಯು ಇತ್ತೀಚೆಗೆ ರಾಷ್ಟ್ರಪತಿಯವರ ಪ್ರಶಸ್ತಿಯನ್ನು ಕೂಡಾ ಗೆದ್ದುಕೊಂಡಿತ್ತು.
ಕಳೆದ ವರ್ಷದಿಂದ ಸರಕಾರವು ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳ ಗುಣಮಟ್ಟದ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುತ್ತಿದೆ. ದೇಶದ ಎರಡು ಪ್ರತಿಷ್ಠಿತ ಕಾಲೇಜುಗಳೆನಿಸಿದ ಚೆನ್ನೈನ ಸೈಂಟ್ ಸ್ಟೀಫನ್ಸ್ ಹಾಗೂ ದಿಲ್ಲಿಯ ಹಿಂದೂ ಕಾಲೇಜ್ ರ್ಯಾಂಕಿಂಗ್ ಪಟ್ಟಿಯಿಂದ ಹೊರಗುಳಿದಿವೆ.
ದಿಲ್ಲಿ ವಿಶ್ವವಿದ್ಯಾನಿಲಯದ ಆತ್ಮಾ ರಾಮ್ ಸನಾತನ ಧರ್ಮ ಕಾಲೇಜ್, ಆಶ್ಚರ್ಯಕರವಾಗಿ 5ನೇ ಸ್ಥಾನಕ್ಕೇರಿದ್ದು, ಕಳೆದ ವರ್ಷ ತನಗಿಂತ ಮುಂದಿದ್ದ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಹಾಗೂ ಕೋಲ್ಕತಾದ ಸೈಂಟ್ ಕ್ಸೇವಿಯರ್ ಕಾಲೇಜನ್ನು ಹಿಂದಿಕ್ಕಿದೆ.