ಸೊಮಾಲಿಯ ಕಡಲ್ಗಳ್ಳರಿಂದ ಭಾರತೀಯ ಹಡಗು ಅಪಹರಣ : ಹಡಗಿನಲ್ಲಿ 11 ಸಿಬ್ಬಂದಿ

Update: 2017-04-03 16:00 GMT

ಬೊಸಾಸೊ (ಸೊಮಾಲಿಯ), ಎ. 3: ಸೊಮಾಲಿಯ ಕರಾವಳಿಯಲ್ಲಿ ಕಡಲ್ಗಳ್ಳರು ಭಾರತೀಯ ವಾಣಿಜ್ಯ ಹಡಗೊಂದನ್ನು ಅಪಹರಿಸಿದ್ದಾರೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸೋಮವಾರ ವರದಿ ಮಾಡಿದೆ.

ಹಲವು ವರ್ಷಗಳಿಂದ ನಿಷ್ಕ್ರಿಯರಾಗಿದ್ದ ಕಡಲ್ಗಳ್ಳರು ಕೆಲವು ವಾರಗಳ ಹಿಂದೆ ತಮ್ಮ ದಂಧೆಯನ್ನು ಪುನಾರಂಭಿಸಿದ್ದಾರೆ. ಇದು ಇತ್ತೀಚಿನ ಅವರ ಎರಡನೆ ಅಪಹರಣವಾಗಿದೆ.

ದುಬೈಯಿಂದ ಬೊಸಾಸೊಗೆ ಹೋಗುತ್ತಿದ್ದ ಹಡಗನ್ನು ಸೊಕೊಟ್ರ ದ್ವೀಪದ ಸಮೀಪ ಅಪಹರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ ಎಂದು ಯುನೈಟಡ್ ಕಿಂಗ್‌ಡಂ ಸಾಗರ ವ್ಯಾಪಾರ ಕಾರ್ಯಾಚರಣೆ (ಯುಕೆಎಂಟಿಒ) ಎಂಬ ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯು ಏಡನ್ ಕೊಲ್ಲಿ ಪ್ರದೇಶದಲ್ಲಿ ಸಾಗುವ ಎಲ್ಲ ವಾಣಿಜ್ಯ ಹಡಗುಗಳು ಮತ್ತು ಹಾಯಿದೋಣಿ (ಯಾಟ್)ಗಳ ಸಮನ್ವಯ ಮತ್ತು ಉಸ್ತುವಾರಿಯ ಕಾರ್ಯವನ್ನು ನೋಡಿಕೊಳ್ಳುತ್ತದೆ.

‘ಅಲ್ ಕೌಸರ್’ ಎಂಬ ಹಡಗು ಎಲ್ಲಿ ಇದೆ ಅಥವಾ ಏನಾಗಿತ್ತು ಎಂಬ ಮಾಹಿತಿ ಲಭ್ಯವಿಲ್ಲ ಎಂದು ಯುಕೆಎಂಟಿಒದ ವಕ್ತಾರರೋರ್ವರು ತಿಳಿಸಿದರು. ತನಿಖೆ ನಡೆಯುತ್ತಿದೆ ಎಂದಷ್ಟೇ ಅವರು ಹೇಳಿದರು.

‘‘ಭಾರತೀಯ ವಾಣಿಜ್ಯ ಹಡಗೊಂದನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದಾರೆ ಹಾಗೂ ಅದು ಸೊಮಾಲಿ ತೀರದತ್ತ ಚಲಿಸುತ್ತಿದೆ ಎನ್ನುವುದು ನಮಗೆ ತಿಳಿದಿದೆ’’ ಎಂದು ಸೊಮಾಲಿಯದ ಪುಂಟ್‌ಲ್ಯಾಂಡ್ ವಲಯದ ಕಡಲ್ಗಳ್ಳತನ ನಿಗ್ರಹ ದಳದ ಮಾಜಿ ನಿರ್ದೇಶಕರು ಹೇಳಿದರು.

ಕಡಲ್ಗಳ್ಳರು ಹಡಗು ಮತ್ತು 11 ಸಿಬ್ಬಂದಿಯನ್ನು ಪುಂಟ್‌ಲ್ಯಾಂಡ್‌ನ ಎಯ್ಲಾ ಎಂಬಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಬ್ರಿಟನ್‌ನ ಡ್ರೈಯಡ್ ಮ್ಯಾರಿಟೈಮ್ ಸೆಕ್ಯುರಿಟಿಯ ಗ್ರೇಮ್ ಗಿಬ್ಬನ್ ಬ್ರೂಕ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News