×
Ad

" ಇನ್ನು ಬೀಫ್ ತಿನ್ನುವುದಿಲ್ಲ" ಎಂದು ಪ್ರಮಾಣ ಮಾಡಿದ ಅಜ್ಮೀರ್ ದರ್ಗಾ ಮುಖ್ಯಸ್ಥ

Update: 2017-04-03 22:56 IST

ಅಜ್ಮೇರ್, ಎ.3: ಗೋಮಾಂಸ(ಬೀಫ್) ತಿನ್ನಬಾರದು ಮತ್ತು ಶರಿಯಾ ಕಾನೂನಿಗೆ ವಿರುದ್ಧವಾಗಿರುವ ತ್ರಿವಳಿ ತಲಾಖ್ ಪದ್ದತಿಯನ್ನು ಕೈಬಿಡುವಂತೆ ಅಜ್ಮೇರ್ ಶರೀಫ್ ದರ್ಗಾದ ಧಾರ್ಮಿಕ ಮುಖಂಡರು ಮುಸ್ಲಿಮರಿಗೆ ಕರೆ ನೀಡಿದ್ದಾರೆ.

ಅಲ್ಲದೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಒತ್ತಾಯಿಸಿದ್ದಾರೆ.

  ಹಿಂದೂ ಮತ್ತು ಮುಸ್ಲಿಮರು ಶಾಂತಿಯುತ ಸಹಬಾಳ್ವೆ ನಡೆಸಬೇಕೆಂದು ತನ್ನ ಜೀವನಪರ್ಯಂತ ಪ್ರಯತ್ನಿಸಿದ ಖ್ವಾಜಾ ಮೊನುದ್ದಿನ್ ಹಸನ್ ಚಿಸ್ತಿ ಅವರ 805ನೇ ಉರುಸ್ (ವಾರ್ಷಿಕ ಪುಣ್ಯತಿಥಿ) ಸಂದರ್ಭದಲ್ಲಿ , ಹಿಂದೂಗಳ ಧಾರ್ಮಿಕ ಭಾವನೆಯನ್ನು ಗೌರವಿಸುವ ಸಲುವಾಗಿ ನಾವು ಗೋಮಾಂಸ ತಿನ್ನುವುದನ್ನು ಬಿಟ್ಟುಬಿಡಬೇಕು ಎಂದು ದರ್ಗಾದ ಧರ್ಮಗುರು ಝೈನು ಲ್ ಅಬೆದಿನ್ ಖಾನ್ ಕರೆ ನೀಡಿದರು.

ನಾವಿನ್ನು ಗೋಮಾಂಸ ತ್ಯಜಿಸುತ್ತೇವೆ ಎಂದು ಇದೇ ಸಂದರ್ಭ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಝೈನುಲ್ ಅಬೆದಿನ್ ಖಾನ್ ಅವರು ಸೂಫಿ ಸಂತ ಖ್ವಾಜಾ ಮೊನುದ್ದೀನ್ ಚಿಸ್ತಿ ಅವರ 22ನೆ ವಂಶಸ್ಥರಾಗಿದ್ದಾರೆ.

ಗೋ ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಗುಜರಾತ್ ಸರಕಾರದ ಕ್ರಮವನ್ನು ಅವರು ಬೆಂಬಲಿಸಿದ್ದು ಗೋವುಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡುವ ಕೃತ್ಯ ತಡೆಗಟ್ಟಲು ಇದು ಸೂಕ್ತ ಕ್ರಮ ಎಂದಿದ್ದಾರೆ.

ತ್ರಿವಳಿ ತಲಾಖ್ ಪದ್ಧತಿಯನ್ನು ಖಂಡಿಸಿದ ಅವರು, ಖುರಾನ್ ಮತ್ತು ಶರಿಯಾದಲ್ಲಿ ಇದಕ್ಕೆ ಅವಕಾಶವಿಲ್ಲ. ಅಮಾನವೀಯ, ಇಸ್ಲಾಮಿ ವಿರೋಧಿ ಮತ್ತು ಲಿಂಗ ಸಮಾನತೆಗೆ ವಿರುದ್ಧವಾಗಿರುವ ಈ ಪದ್ದತಿಯನ್ನು ಅತೀ ಶೀಘ್ರ ನಿಷೇಧಿಸಬೇಕು ಎಂದರು. ಖುರಾನ್ ಮತ್ತು ಪ್ರವಾದಿಯವರು ಎಂದಿಗೂ ಅನುಮೋದಿಸದ ಈ ಪದ್ದತಿ ಕೈಬಿಡಲು ಸಮುದಾಯದ ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ. ಈ ಕೆಟ್ಟ ಪದ್ದತಿಗೆ ನಮ್ಮ ಸೋದರಿಯರು ಮತ್ತು ಪುತ್ರಿಯರು ಬಲಯಾಗದಂತೆ ತಡೆಯಬೇಕು ಎಂದವರು ಹೇಳಿದರು. ದೇಶದ ಅತ್ಯಂತ ಪವಿತ್ರ ಮುಸ್ಲಿಮ್ ಕ್ಷೇತ್ರಗಳಲ್ಲಿ ಅಜ್ಮೇರ್ ದರ್ಗವೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News