ತ್ರಿಶೂರು ಪೂರಂ ಉತ್ಸವದಲ್ಲಿ ಹಾಲಿ ನಿಯಮದಡಿ ಸುಡುಮದ್ದು ಪ್ರದರ್ಶನಕ್ಕೆ ಕೇಂದ್ರದ ಅಸ್ತು

Update: 2017-04-04 14:33 GMT

ಹೊಸದಿಲ್ಲಿ,ಎ.4: ಕೇರಳದ ಪ್ರಸಿದ್ಧ ತ್ರಿಶೂರು ಪೂರಂ ಉತ್ಸವದಲ್ಲಿ ಪ್ರಚಲಿತ ನಿಯಮಾವಳಿಯಡಿ ಸುಡುಮದ್ದು ಪ್ರದರ್ಶನಕ್ಕೆ ತನ್ನ ಸಚಿವಾಲಯವು ಅನುಮತಿ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಪ್ರಕಟಿಸಿದ್ದಾರೆ.

 ಇದಕ್ಕಾಗಿ ನಾಗಪುರದ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ)ಯ ಅನುಮತಿಯನ್ನು ಪಡೆದುಕೊಳ್ಳುವಂತೆ ಸ್ಥಳೀಯ ನಿರ್ಮಿತ ಸುಡುಮದ್ದುಗಳ ತಯಾರಕರಿಗೆ ಸಚಿವಾಲಯವು ಸೂಚಿಸಿದೆ.

ಉತ್ಸವದಲ್ಲಿ ಅಪಾಯಕಾರಿ ಮತ್ತು ನಿಷೇಧಿತ ಪೊಟ್ಯಾಷಿಯಂ ಕ್ಲೋರೇಟ್ ಅಥವಾ ಇತರ ಯಾವುದೇ ಕ್ಲೋರೇಟ್ ಬಳಸಿ ತಯಾರಿಸಲಾದ ಬ್ರಾಂಡೆಡ್ ಅಥವಾ ಸಾಂಪ್ರದಾಯಿಕ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಸೀತಾರಾಮನ್ ಸ್ಪಷ್ಟ ಪಡಿಸಿದರು.

 ಪರವಾನಿಗೆ ಹೊಂದಿರದ ಅನಧಿಕೃತ ಸುಡುಮದ್ದುಗಳ ಪ್ರದರ್ಶನಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಬ್ರಾಂಡೆಡ್ ಸುಡುಮದ್ದುಗಳಂತೆ ಸಾಂಪ್ರದಾಯಿಕ ಸುಡುಮದ್ದುಗಳು ಅವು ಒಳಗೊಂಡಿರುವ ರಾಸಾಯನಿಕಗಳು ಮತ್ತು ಅವುಗಳ ಸಂಯೋಜನೆಯ ವಿವರಗಳನ್ನು ಹೊಂದಿರುವುದಿಲ್ಲ ಮತ್ತು ಇವುಗಳ ತಯಾರಕರು ದಾಸ್ತಾನು ಮತ್ತು ಪ್ರದರ್ಶನಕ್ಕೆ ಪರವಾನಿಗೆ ಹೊಂದಿರುವುದಿಲ್ಲ. ಹೀಗಾಗಿ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲು ಇಂತಹ ಸಾಂಪ್ರದಾಯಿಕ ಸುಡುಮದ್ದುಗಳ ತಯಾರಕರಿಗೆ ನಿಗದಿತ ಕಾಲಾವಧಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಕೇರಳದ ಕೊಲ್ಲಂ ಜಿಲ್ಲೆಯ ಪರವೂರಿನ 500 ವರ್ಷಗಳಷ್ಟು ಹಳೆಯದಾದ ಪುತ್ತಿಂಗಾಲ್ ದೇವಸ್ಥಾನದಲಿ ಸಂಭವಿಸಿದ್ದ, 108 ಜೀವಗಳನ್ನು ಬಲಿ ಪಡೆದಿದ್ದ ಭೀಕರ ಸುಡುಮದ್ದು ದುರಂತವನ್ನು ಪ್ರಸ್ತಾಪಿಸಿದ ಅವರು,ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತಗಳು 2008ರ ಸ್ಫೋಟಕಗಳ ನಿಯಮಾವಳಿಯನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದು ಸಚಿವೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News