×
Ad

ಅಮಾಯಕರ ದೃಷ್ಟಿ ಕಿತ್ತ ವೈದ್ಯರು

Update: 2017-04-05 09:31 IST

ಹೊಸದಿಲ್ಲಿ,ಎ.5: ಇಲ್ಲಿನ ಗುರುತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಕಲಬೆರಕೆ ಚುಚ್ಚುಮದ್ದು ನೀಡಿದ ಪರಿಣಾಮ 20 ಮಂದಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಎಂಟು ಮಂದಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಅವರ ದೃಷ್ಟಿಯನ್ನು ಉಳಿಸುವ ಸಲುವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

"ಕೆಲವರಿಗೆ ಲಘು ಪ್ರಮಾಣದ ಅಡ್ಡ ಪರಿಣಾಮ ಆಗಿದೆ. ಇವರ ಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ. ಆದರೆ ಎಂಟು ಮಂದಿಗೆ ಅವರ ಕಣ್ಣಿನಲ್ಲಿ ಸೋಂಕು ತಗುಲಿದ ಭಾಗವನ್ನು ಕಿತ್ತುಹಾಕಲು ಪಾರದರ್ಶಕ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಬಹುತೇಕ ಎಲ್ಲರೂ ತಮ್ಮ ದೃಷ್ಟಿಯ ಬಹುಪಾಲನ್ನು ಮರಳಿ ಪಡೆಯುವ ವಿಶ್ವಾಸವಿದೆ" ಎಂದು ಎಐಐಎಂಎಸ್‌ನ ಡಾ.ರಾಜೇಂದ್ರ ಪ್ರಸಾದ್ ಸೆಂಟರ್ ಫಾರ್ ಆಪ್ಟಲೋಮಿಕ್ ಸೈನ್ಸಸ್ ಮುಖ್ಯಸ್ಥ ಡಾ.ಅತುಲ್ ಕುಮಾರ್ ವಿವರಿಸಿದ್ದಾರೆ.

ಜಿಬಿಟಿ ವೈದ್ಯರು ಬಳಸಿದ ಒಂದು ಕಿರುಬಾಟಲಿ ಚುಚ್ಚುಮದ್ದು ಕಲಬೆರಕೆಯಿಂದ ಕೂಡಿತ್ತು ಎನ್ನಲಾಗಿದೆ. ಒಂದು ಕಿರು ಬಾಟಲಿಯಲ್ಲಿ 20 ಚುಚ್ಚುಮದ್ದು ನೀಡಬಹುದಾಗಿದ್ದು, ಇದು ತೀವ್ರ ಸೋಂಕಿಗೆ ಕಾರಣವಾಗಿದೆ" ಎಂದು ಕುಮಾರ್ ವಿಶ್ಲೇಷಿಸಿದ್ದಾರೆ.

ಮುಪ್ಪು, ಮಧುಮೇಹ, ಹೈಪರ್ ಟೆನ್ಷನ್ ಹಾಗೂ ರಕ್ತನಾಳದ ಬಿರುಕಿನಿಂದ ಬರುವ ಅಂಧತ್ವ ನಿವಾರಿಸಲು ಅವಸ್ಟಿನ್ ಎಂಬ ಚುಚ್ಚುಮದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಚುಚ್ಚುಮದ್ದಾಗಿದೆ. ಈ ಔಷಧಿಯನ್ನು ಸ್ವಿಡ್ಝರ್‌ಲೆಂಡ್ ಹಾಗೂ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

"ನನ್ನ ಸಹೋದರನಿಗೆ ಶನಿವಾರ ಚುಚ್ಚುಮದ್ದು ನೀಡಲಾಗಿತ್ತು. ಮರುದಿನ ಮುಂಜಾನೆ ಮಾಮೂಲಿ ತಪಾಸಣೆಗೆ ಕರೆಯಲಾಗಿತ್ತು. ಆತನ ಕಣ್ಣು ಕೆಂಪಾಗಿ ಅಸಾಧ್ಯ ನೋವು ಇತ್ತು. ವೈದ್ಯರು ಇದನ್ನು ಗಮನಿಸಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಬಳಿಕ ಆತನನ್ನು ಶಸ್ತ್ರಚಿಕಿತ್ಸೆಗಾಗಿ ಎಐಐಐಎಂಎಸ್‌ಗೆ ಕಳುಹಿಸಲಾಯಿತು" ಎಂದು ಒಂದು ತಿಂಗಳಿನಿಂದ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಸಹೋದರ ಜಸ್ವೀಂದರ್ ಸಿಂಗ್ ವಿವರಿಸಿದರು. ಕಣ್ಣಿನ ನರದಲ್ಲಿ ಬಿರುಕು ಕಾಣಿಸಿಕೊಂಡಿದ್ದಕ್ಕಾಗಿ ಚಿಕಿತ್ಸೆಗೆ ಅವರು ದಾಖಲಾಗಿದ್ದರು. ಈ ಚುಚ್ಚುಮದ್ದು ಪಡೆದ ಎಲ್ಲ 20 ಮಂದಿಯಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News