×
Ad

ಮೂರು ದಶಕಗಳಲ್ಲೇ ಮುಸ್ಲಿಮ್ ಸಚಿವರಿಲ್ಲದ ಟಿಡಿಪಿ ಸಂಪುಟ : ವ್ಯಾಪಕ ಆಕ್ರೋಶ

Update: 2017-04-05 11:13 IST

ಅಮರಾವತಿ, ಎ. 5: ಸಂಪುಟ ಪುನರ್ರಚನೆ ಸಂದರ್ಭ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡದೆ ಇರುವುದಕ್ಕೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಯ್ಡು ಅವರು ಬಿಜೆಪಿಯೊಂದಿಗೆ ಮೈತ್ರಿ ಸಾಧಿಸುವ ಏಕೈಕ ಉದ್ದೇಶದೊಂದಿಗೆ ಕಾರ್ಯನಿರ್ವಸುತ್ತಿದ್ದಾರೆ ಎಂದೂ ಮುಸ್ಲಿಮ್ ನಾಯಕರು ಆರೋಪಿಸಿದ್ದಾರೆ.

ಕಳೆದ ಮೂರು ದಶಕಗಳಲ್ಲಿಯೇ ಮುಸ್ಲಿಮ್ ಸಚಿವರಿಲ್ಲದ ಟಿಡಿಪಿ ಸಂಪುಟ ಇದಾಗಿದೆ ಎನ್ನಲಾಗಿದೆ.ತನ್ನ ಪ್ರಥಮ ಸಚಿವ ಸಂಪುಟದಲ್ಲಿ ಕೂಡ ನಾಯ್ಡು ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಪಕ್ಷದ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿ ಚುನಾವಣೆಯಲ್ಲಿ ಸೋತಿದ್ದರಿಂದ ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ ಎಂಬ ಸಬೂಬು ಆಗ ನೀಡಲಾಗಿತ್ತು..

ನಂತರದ ಬೆಳವಣಿಗೆಯಲ್ಲಿ ಹಿರಿಯ ನಾಯಕ ಹಾಗೂ ಟಿಡಿಪಿ ಪ್ರಧಾನ ಕಾರ್ಯದರ್ಶಿ ಎಂ. ಎ. ಶರಿಫ್ ಅವರಿಗೆ ವಿಧಾನಪರಿಷತ್ ಸ್ಥಾನ ನೀಡಲಾಗಿತ್ತು. ಇದರ ಹೊರತಾಗಿ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ವೈಎಸ್‌ಆರ್‌ಸಿ ಶಾಸಕರಾದ ಅತ್ತರ್ ಚಾಂದ್ ಬಾಷ ಹಾಗೂ ಜಲೀಲ್ ಖಾನ್ ತಮಗೆ ಸಚಿವ ಹುದ್ದೆ ದೊರೆಯಬಹುದೆಂಬ ಆಶಾವಾದದೊಂದಿಗೆ ಟಿಡಿಪಿ ಸೇರಿದ್ದರು.

ಆದರೂ ನಾಯ್ಡು ಅವರಲ್ಲಿ ಯಾರೊಬ್ಬರಿಗೂ ಸಚಿವ ಹುದ್ದೆ ನೀಡುವ ಮನಸ್ಸು ಮಾಡಿಲ್ಲ.ಆರಂಭದಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯನ್ನು ಪ್ರತಿನಿಧಿಸಲು ಶರೀಫ್ ಅವರಿಗೆ ಸಚಿವ ಸ್ಥಾನ ನೀಡುವುದೆಂದು ನಿರ್ಧರಿಸಲಾಗಿತ್ತಾದರೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತ ಬ್ಯಾಂಕ್ ಇಲ್ಲವೆಂದು ಅವರ ಹೆಸರನ್ನು ಕಡೆಗಣಿಸಲಾಯಿತು. ನಂತರ ಚಾಂದ್ ಬಾಷ ಅವರ ಹೆಸರು ಮುಂದೆ ಬಂದಿತ್ತಾದರೂ ವಿತ್ತ ಸಚಿವ ಯನಮಲ ರಾಮಕೃಷ್ಣುಡು ಅವರು ಹಿಂದುಳಿದ ವರ್ಗಗಳ ಪಿಥನಿ ಸತ್ಯನಾರಾಯಣ ಅವರ ಹೆಸರನ್ನು ಸೂಚಿಸಿದ್ದರು.ಇದೀಗ ನಾಯ್ಡು ನಿರ್ಧಾರದಿಂದ ಆಕ್ರೋಶಗೊಂಡಿರುವ ಮುಸ್ಲಿಮ್ ಸಮುದಾಯದ ನಾಯಕರು ಅವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲು ನಿರ್ಧರಿಸಿದ್ದಾರೆ. ನಾವು ಸುಮ್ಮನೆ ಕೂರುವುದಿಲ್ಲ, ಎಂದು ಗುಂಟೂರಿನ ಮುಸ್ಲಿಮ್ ನಾಯಕ ಶೇಖ್ ಖಝವಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News