×
Ad

ಕಾಂಗ್ರೆಸ್ಸಿಗರು ಇನ್ನಾದರೂ ಜನರ ನಡುವೆ ಹೋಗದಿದ್ದರೆ ಅವರನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ: ದಿಗ್ವಿಜಯ್

Update: 2017-04-05 12:09 IST

 ಹೊಸದಿಲ್ಲಿ,ಎ.5: ಕಾಂಗ್ರೆಸ್ಸಿಗರು ಜನರ ನಡುವೆ ಹೋಗಿ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದಾರೆ. ಈಗಲಾದರೂ ಸುಧಾರಿಸಿಕೊಳ್ಳದಿದ್ದರೆ ಅವರನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಮಂಗಳವಾರ ಇಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ನೊಳಗಿರುವ ಗುಂಪುಗಾರಿಕೆಯ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್" ಕಾಂಗ್ರೆಸ್ಸಿಗರು ಈಗ ಸುಧಾರಿಸಿಕೊಳ್ಳದಿದ್ದರೆ ಅವರನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ. ಸಂಘಟನೆಯನ್ನು ಮುಷ್ಠಿಯಲ್ಲಿಟ್ಟುಕೊಳ್ಳುವವರು ಮತ್ತು ಮನಸೋಇಚ್ಛೆ ವರ್ತಿಸುವವರು ಈಗ ಜನರ ನಡುವೆ ಹೋಗಿ ಕೆಲಸ ಮಾಡಬೇಕು. ಜೊತೆಗೆ ಪಕ್ಷದಲ್ಲಿ ಎಲ್ಲರನ್ನೂ ಗೌರವಿಸಬೇಕು ಮತ್ತುಆದರಿಸಬೇಕು" ಎಂದು ಹೇಳಿದರು.

ಗೋವಾದಲ್ಲಿ ಕಾಂಗ್ರೆಸ್ ಸರಕಾರ ರಚಿಸಲು ವಿಫಲವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್ ಸಿಂಗ್" ಸರಕಾರ ರಚಿಸಲು ಹಣದ ಚೀಲವನ್ನು ತೆರೆದಿಡಲಾಯಿತು. ಆದರೆ ನಮ್ಮಿಂದ ಹಾಗೆ ಮಾಡಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು. ಗೋವಾ ಕಾಂಗ್ರೆಸ್‌ನ ಉಸ್ತುವಾರಿಯಾಗಿದ್ದ ಅವರನ್ನು ವಿರೋಧಿಗಳು"ದಿಗ್ವಿಜಯ್ ಗೋವಾಕ್ಕೆ ಸುತ್ತಾಡಿ ಬರಲು ಹೋಗಿದ್ದರು. ಆದ್ದರಿಂದ ಕಾಂಗ್ರೆಸ್ ಸರಕಾರ ರಚನೆಯಾಗಲಿಲ್ಲ" ಎಂದು ಟೀಕಿಸಿರುವತ್ತ ಗಮನ ಸೆಳೆದಾಗ ಅವರು ನಾನು ಅಲ್ಲಿಗೆ ಸುತ್ತಾಡಿ ಬರಲು ಹೋಗಿದ್ದಿದ್ದರೆ ಅಲ್ಲಿ ಕಾಂಗ್ರೆಸ್ ಆರು ಸೀಟು ಇದ್ದಲ್ಲಿಂದ 17 ಸೀಟನ್ನು ಗಳಿಸಲು ಹೇಗೆ ಸಾಧ್ಯವಾಯಿತೆಂದು ಪ್ರಶ್ನಿಸಿದ್ದಾರೆ.

ಗೋವಾದಲ್ಲಿ ಬಿಜೆಪಿ ಸರಕಾರ ರಚಿಸಲು ಸಾಧ್ಯವಾದದ್ದಕ್ಕೆ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಕೃತಜ್ಞತೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್ ಅವರು ರಾಜ್ಯದ ಜನರಿಗೆ ಮೋಸ ಮಾಡಿದ್ದಕ್ಕೆ ಕ್ಷಮೆಯಾಚಿಸಲಿ ಮತ್ತು ಶಾಸಕರನ್ನು ಖರೀದಿಸಿದ್ದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೃತಜ್ಞತೆ ಹೇಳಲಿ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News