ಭಯೋತ್ಪಾದಕರಿಗೆ ಮಣಿಯದ 'ಚಿರತೆ'
ಹೊಸದಿಲ್ಲಿ,ಎ.5 : ಎರಡು ತಿಂಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ ಒಂಬತ್ತು ಬುಲೆಟ್ ದೇಹದೊಳಗೆ ಹೊಕ್ಕು ಕೋಮಾಗೆ ಜಾರಿದ್ದ ಸಿಆರ್‌ಪಿಎಫ್ ಕಮಾಂಡೆಂಟ್ ಚೇತನ್ ಕುಮಾರ್ ಚೀತಾ ಅವರೀಗ ಚೇತರಿಸಿಕೊಂಡಿದ್ದಾರೆ. ಅವರಿಗೆ ಸ್ಮತಿ ಮರಳಿ ಬಂದಿದೆ ಹಾಗೂ ಅವರು ಈಗ ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಇದು ಪವಾಡವಲ್ಲದೆ ಮತ್ತೇನೂ ಅಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಎಐಐಎಂಎಸ್ ವೈದ್ಯರು ಹೇಳುತ್ತಾರೆ. ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳುವ ಸಾಧ್ಯತೆಯಿದೆ.
45 ವರ್ಷದ ಚೇತನ್ ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಅವರ ತಲೆಯೊಳಗೆ ಗುಂಡು ಹೊಕ್ಕಿತ್ತಲ್ಲದೆ ಅವರ ಕೈಗಳ ಮೂಳೆಗಳು ಮುರಿದಿದ್ದವು. ಅವರ ಬಲಗಣ್ಣು ಕೂಡ ಹಾನಿಗೊಂಡಿತ್ತು. ಫೆಬ್ರವರಿ 14ರಂದು ಕಾಶ್ಮೀರದ ಬಂಡಿಪೊರ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ನಡೆದ ಈ ಎನ್ಕೌಂಟರಿನಲ್ಲಿ ಮೂವರು ಯೋಧರು ಮೃತಪಟ್ಟು ಒಬ್ಬ ಉಗ್ರ ಹತನಾಗಿದ್ದ.
ತೀವ್ರ ಗಾಯಗೊಂಡಿದ್ದ ಚೇತನ್ ಅವರನ್ನು ಮೊದಲು ಶ್ರೀನಗರದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಅವರನ್ನು ದೆಹಲಿಯ ಎಐಐಎಂಎಸ್ ಗೆ ಸ್ಥಳಾಂತರಿಸಲಾಗಿತ್ತು. 24 ಗಂಟೆಗೊಳಗಾಗಿ ಅವರಿಗೆ ಶಸ್ತ್ರಕ್ರಿಯೆ ನಡೆಸಿ ಅವರ ತಲೆಬುರುಡೆಯ ಒಂದು ಭಾಗವನ್ನು ತೆಗೆಯಲಾಗಿತ್ತಲ್ಲದೆ ಅವರ ಗಾಯಗಳಿಂದಾಗಿ ಸೋಂಕು ಹರಡದಂತೆ ಮಾಡಲು ಅವರಿಗೆ ಬಹಳಷ್ಟು ಆಂಟಿ ಬಯೋಟಿಕ್ಸ್ ನೀಡಲಾಗಿತ್ತು. ಅವರ ಎಡಗಣ್ಣಿಗಾದ ಗಾಯಕ್ಕೆ ಚಿಕಿತ್ಸೆ ನೀಡಲಾಗಿದ್ದರೂ ಬಲಗಣ್ಣನ್ನು ಸರಿಪಡಿಸಲು ವೈದ್ಯರಿಗೆ ಸಾಧ್ಯವಾಗಿಲ್ಲ.
ಚೇತನ್ ಅವರಲ್ಲಿರುವ ಆತ್ಮವಿಶ್ವಾಸವೇ ಅವರನ್ನು ಇಂದು ಗುಣಮುಖವನ್ನಾಗಿಸಿದೆ ಎಂದು ಅವರ ಪತ್ನಿ ಉಮಾ ಸಿಂಗ್ ಹೇಳುತ್ತಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.