ದಲಾಯಿ ಲಾಮಾ ಅರುಣಾಚಲ ಭೇಟಿಗೆ ಚೀನಾ ಆಕ್ರೋಶ
ಬೀಜಿಂಗ್, ಎ. 5: ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರ ಅರುಣಾಚಲಪ್ರದೇಶ ಭೇಟಿಯು ಭಾರತ-ಚೀನಾ ಸಂಬಂಧಕ್ಕೆ ತೀವ್ರ ಧಕ್ಕೆ ತಂದಿದೆ ಎಂದು ಚೀನಾ ಹೇಳಿದೆ.
ಚೀನಾ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ ಚೀನಾದ ಅಧಿಕೃತ ಮಾಧ್ಯಮವು ದಲಾಯಿ ಲಾಮಾ ಭೇಟಿಯನ್ನು ಖಂಡಿಸಿ ಲೇಖನವೊಂದನ್ನು ಪ್ರಕಟಿಸಿತ್ತು. ‘‘ದಲಾಯಿ ಲಾಮಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಪೂರ್ವಾಧಿಕಾರಿಗಳಿಗಿಂತ ವಿಭಿನ್ನ ನಿಲುವನ್ನು ತಳೆದಿರುವಂತೆ ಅನಿಸುತ್ತಿದೆ. ಅವರು ದಲಾಯಿ ಲಾಮಾರ ಸಾರ್ವಜನಿಕ ಸಂಪರ್ಕಗಳನ್ನು ವೃದ್ಧಿಸುತ್ತಿದ್ದಾರೆ ಹಾಗೂ ಬೀಜಿಂಗ್‌ನ ನಿಲುವನ್ನು ಪ್ರಶ್ನಿಸುತ್ತಿದ್ದಾರೆ’’ ಎಂದು ಲೇಖನದಲ್ಲಿ ಬರೆಯಲಾಗಿದೆ.
ಅದೇ ವೇಳೆ, ‘‘ಭಾರತ ನನ್ನನ್ನು ಯಾವತ್ತೂ ಚೀನಾದ ವಿರುದ್ಧ ಬಳಸಿಲ್ಲ’’ ಎಂಬುದಾಗಿ ದಲಾಯಿ ಲಾಮಾ ಎನ್‌ಡಿಟಿವಿಗೆ ಹೇಳಿದ್ದಾರೆ.
ಅರುಣಾಚಲಪ್ರದೇಶ ‘ದಕ್ಷಿಣ ಟಿಬೆಟ್’ ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿದೆ. ಗಡಿ ರಾಜ್ಯವು ತನ್ನ ಭೂಭಾಗದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಪದೇ ಪದೇ ಹೇಳುತ್ತಿದೆ.
ಅರುಣಾಚಲಪ್ರದೇಶಕ್ಕೆ ದಲಾಯಿ ಲಾಮಾ ನೀಡಿರುವ ಒಂದು ವಾರದ ಭೇಟಿಯ ವಿಷಯದಲ್ಲಿ ಚೀನಾ ‘ಕೃತಕ ವಿವಾದ’ವೊಂದನ್ನು ಸೃಷ್ಟಿಸುತ್ತಿದೆ ಎಂದು ಭಾರತ ನಿನ್ನೆ ಹೇಳಿದೆ.
ದಲಾಯಿ ಲಾಮಾ ನೀಡಿರುವ ಭೇಟಿ ಧಾರ್ಮಿಕ, ರಾಜಕೀಯವಲ್ಲ ಎಂಬುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ದಲಾಯಿ ಲಾಮಾ ಓರ್ವ ಅಪಾಯಕಾರಿ ‘ಪ್ರತ್ಯೇಕತಾವಾದಿ’ಯಾಗಿದ್ದು, ಅವರು ಟಿಬೆಟನ್ನು ಚೀನಾದಿಂದ ಪ್ರತ್ಯೇಕಿಸಲು ಬಯಸುತ್ತಿದ್ದಾರೆ ಎಂಬುದಾಗಿ ಚೀನಾ ಭಾವಿಸುತ್ತಿದೆ.
‘‘ಟಿಬೆಟ್ ಚೀನಾದ ಭಾಗವಾಗಿದೆ, ಆದರೆ ಅಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ’’ ಎಂಬುದಾಗಿ ಎನ್‌ಡಿಟಿವಿಯೊಂದಿಗೆ ಮಾತನಾಡಿದ 81 ವರ್ಷದ ದಲಾಯಿ ಲಾಮಾ ಹೇಳಿದ್ದಾರೆ.
ಇದರ ಹೊರತಾಗಿಯೂ, ಲಾಮಾರ ಅರುಣಾಚಲಪ್ರದೇಶ ಭೇಟಿಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಹಾಗೂ ಈ ಬಗ್ಗೆ ಭಾರತಕ್ಕೆ ಪ್ರತಿಭಟನೆ ಸಲ್ಲಿಸುತ್ತೇವೆ ಎಂದು ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದರು.
ಸೈನಿಕನ ವೇಷದಲ್ಲಿ ಭಾರತಕ್ಕೆ ಪಲಾಯನಟಿಬೆಟ್ನಲ್ಲಿ ಎದ್ದ ಬಂಡಾಯವನ್ನು ದಮನಿಸಲು ಚೀನಾ ಸೇನೆಯನ್ನು ಕಳುಹಿಸಿದಾಗ, ಯುವ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಪ್ರಾಣಭಯದಿಂದ 1959ರಲ್ಲಿ ಭಾರತಕ್ಕೆ ಪಲಾಯನಗೈದರು.
ಟಿಬೆಟ್‌ಗೆ ಬರುತ್ತಿದ್ದ ಚೀನಾದ ಸೈನಿಕರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಸೈನಿಕನ ವೇಷದಲ್ಲಿ ಹಿಮಾಲಯ ಪರ್ವತದಲ್ಲಿ 13 ದಿನಗಳ ಕಾಲ ನಡೆದು ಅರುಣಾಚಲಪ್ರದೇಶದ ಮೂಲಕ ಭಾರತ ಪ್ರವೇಶಿಸಿದರು.
ಭಾರತ ಅವರಿಗೆ ಧರ್ಮಶಾಲೆಯಲ್ಲಿ ನೆಲೆಯೊಂದನ್ನು ಒದಗಿಸಿತು. ಅಲ್ಲಿ ಅವರು ಟಿಬೆಟ್ ದೇಶಭ್ರಷ್ಟ ಸರಕಾರವೊಂದನ್ನು ಸ್ಥಾಪಿಸಿದರು.