ತೆಲಂಗಾಣದ ಟೆಕ್ಕಿ ಸಿಯಾಟಲ್‌ನಲ್ಲಿ ಆತ್ಮಹತ್ಯೆ
ಸಿಯಾಟಲ್ (ಅಮೆರಿಕ), ಎ. 5: ಅಮೆರಿಕದ ಸಿಯಾಟಲ್ ನಗರದಲ್ಲಿ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಇಲ್ಲಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
37 ವರ್ಷದ ಮಧುಕರ್ ರೆಡ್ಡಿ ಗುಡೂರ್ ವಿವಾಹಿತರಾಗಿದ್ದು ಹೆಣ್ಣು ಮಗುವೊಂದನ್ನು ಹೊಂದಿದ್ದಾರೆ.
ಹೈದರಾಬಾದ್ ಸಮೀಪದ ಭೊಂಗಿರ್‌ನಲ್ಲಿ ವಾಸಿಸುತ್ತಿರುವ ಅವರ ಹೆತ್ತವರಿಗೆ ಮಂಗಳವಾರ ಈ ವಿಷಯವನ್ನು ತಿಳಿಸಲಾಗಿದೆ.
ಮಧುಕರ್ ರೆಡ್ಡಿ ತನ್ನ ತಾಯಿಗೆ ಕಳುಹಿಸಿದ ಎಸ್‌ಎಂಎಸ್ ಸಂದೇಶವೊಂದರಲ್ಲಿ , ‘‘ಪ್ರೀತಿಯ ಅಮ್ಮ, ದಯವಿಟ್ಟು ನನ್ನನ್ನು ಕ್ಷಮಿಸು’’ ಎಂದು ಹೇಳಿದ್ದಾರೆನ್ನಲಾಗಿದೆ.
‘‘ಅವರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಮನೆಯೊಂದನ್ನು ಖರೀದಿಸಿದ್ದರು. ಆದರೆ, ವೈವಾಹಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ, ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ನಿಖರವಾಗಿ ನಾವು ಹೇಳಲಾರೆವು’’ ಎಂದು ಅವರ ಸಂಬಂಧಿ ದುರ್ಗಾ ರೆಡ್ಡಿ ‘ಡೆಕ್ಕನ್ ಕ್ರಾನಿಕಲ್’ಗೆ ಹೇಳಿದ್ದಾರೆ.
ಅವರ ಹೆಂಡತಿಯೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಅವರು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.