ಉರುಳುಸೇವೆ, ಇಲಿ ಕಚ್ಚಿ ಪ್ರತಿಭಟನೆ!

Update: 2017-04-06 03:48 GMT

ಹೊಸದಿಲ್ಲಿ, ಎ. 6: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಜಂತರ್ ಮಂತರ್‌ನಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರೈತರು ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಸ್ತೆಯಲ್ಲಿ ಉರುಳುಸೇವೆ ಮಾಡುವಲ್ಲಿಂದ ಹಿಡಿದು ಇಲಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪ್ರತಿಭಟನೆ ಮಾಡುವವರೆಗೆ ದಿನದಿಂದ ದಿನಕ್ಕೆ ಹೊಸ ಬಗೆಯ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ತೀವ್ರ ಬರಗಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾದ ರೈತರ ತಲೆಬುರುಡೆಯೊಂದಿಗೆ ಪ್ರತಿಭಟನೆ ನಡೆಸಿದ್ದರು. ಬುಧವಾರ ಜೀವಂತ ಇಲಿಗಳನ್ನು ಹಿಡಿದು ತಂದು ಬಾಯಿಯ ಬಳಿ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ತಮಿಳುನಾಡಿನ ರೈತರು ಇಲಿಗಳನ್ನೇ ಹಿಡಿದು ತಿಂದು ಜೀವನ ಸಾಗಿಸಬೇಕಾಗುತ್ತದೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಿಕೊಡಲು ಈ ಪ್ರತಿಭಟನೆ ನಡಸಿದರು. ರೈತರ ಸಾಲ ಮನ್ನಾ, 40 ಸಾವಿರ ಕೋಟಿ ರೂಪಾಯಿಯ ಬರ ಪರಿಹಾರ ಪ್ಯಾಕೇಜ್ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ಅಂಗಪ್ರದಕ್ಷಿಣಂ (ಉರುಳುಸೇವೆ) ಪ್ರತಿಭಟನೆಯನ್ನೂ ರೈತರು ನಡೆಸಿದರು. 10 ಮಂದಿ ಪುರುಷರು ಹಾಗೂ ಒಬ್ಬ ಮಹಿಳೆ ತಮ್ಮ ಕಾಲುಗಳನ್ನು ತಂತಿಯಿಂದ ಬಿಗಿದುಕೊಂಡು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಉರುಳುಸೇವೆ ನಡೆಸಿದರು. ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಪಳನಿಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಿ.ಅಯ್ಯಕಣ್ಣು ಪ್ರತಿಭಟನೆ ವೇಳೆ ಡಿಹೈಡ್ರೇಷನ್‌ನಿಂದ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ರೈತರಲ್ಲಿ ಬಹಳಷ್ಟು ಮಂದಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದು, ಪ್ರತಿಭಟನಾಕಾರರ ಸಂಖ್ಯೆ ಈಗ 100ಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News