ವಾಕಿಂಗ್ ಮಾಡುತ್ತಿದ್ದ ಪತ್ರಕರ್ತೆಯ ಮೇಲೆ ದಾಳಿ
ಹೊಸದಿಲ್ಲಿ,ಎ.6: ರಾಷ್ಟ್ರ ರಾಜಧಾನಿಯ ಅಶೋಕ ವಿಹಾರದ ಸಾರ್ವಜನಿಕ ಉದ್ಯಾನವನದಲ್ಲಿ ನಿನ್ನೆ ರಾತ್ರಿ ವಾಯುವಿಹಾರದಲ್ಲಿ ತೊಡಗಿದ್ದ 45ರ ಹರೆಯದ ಫ್ರೀಲಾನ್ಸ್ ಪತ್ರಕರ್ತೆಯ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದು, ಮಿದುಳಿಗೆ ತೀವ್ರ ಪೆಟ್ಟು ಬಿದ್ದಿರುವ ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರ್ಣಾ ಕಾಲ್ರಾರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಕೊಂಚ ಕಾಲ ಪ್ರಜ್ಞೆ ಮರುಕಳಿಸಿದ್ದು, ಆ ವೇಳೆ ಆಕೆ ತನ್ನ ಮೇಲಿನ ಹಲ್ಲೆಯ ವಿವರವನ್ನು ಪೊಲೀಸರಿಗೆ ನೀಡಿದ ಸ್ವಲ್ಪಹೊತ್ತಿನಲ್ಲಿಯೇ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಅಪರ್ಣಾಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ತಲೆಬುರುಡೆಯ ಕೆಲವು ಭಾಗಗಳು ಕಾಣೆಯಾಗಿವೆಯೆಂದು ವೈದ್ಯರು ತಿಳಿಸಿದ್ದಾರೆ. ಮಿದುಳಿನ ನರಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿ ಎಚ್.ಸಿ.ಭಾಟಿಯಾ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರಿಗೆ ದಾಳಿಕೋರನ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ ಎಂದು ಡಿಸಿಪಿ ಮಿಲಿಂದ ದುಂಬ್ರೆ ಹೇಳಿದರು.
ಫ್ರೀಲಾನ್ಸ್ ಪತ್ರಕರ್ತೆಯಾಗುವ ಮುನ್ನ ಅಪರ್ಣಾ ಮುಖ್ಯವಾಹಿನಿಯ ವೃತ್ತ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರು ತನ್ನ ಕುಟುಂಬದೊಂದಿಗೆ ಅಶೋಕ ವಿಹಾರ ಮೂರನೆ ಹಂತದಲ್ಲಿ ವಾಸವಿದ್ದಾರೆ.
ಎಂದಿನಂತೆ ನಿನ್ನೆ ಸಂಜೆಯೂ ಅಪರ್ಣಾ ಮನೆಸಮೀಪದ ಪಿಕ್ನಿಕ್ ಹಟ್ ಪಾರ್ಕ್‌ಗೆ ವಾಯುವಿಹಾರಕ್ಕೆ ತೆರಳಿದ್ದರು. ಅಲ್ಲಿ ದಾಳಿಗೊಳಗಾಗಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅಪರ್ಣಾರ ಮತ್ತು ಮೂಗಿನಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಅಪರಿಚಿತ ವ್ಯಕ್ತಿಯೋರ್ವ ನೀಡಿದ್ದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಿದುಳಿಗೆ ತೀವ್ರ ಏಟು ಬಿದ್ದಿರುವ ಅಪರ್ಣಾರನ್ನು ದೀಪ್‌ಚಂದ್ ಆಸ್ಪತ್ರೆಗೆ ದಾಖಲಿಸಿ ರಾತ್ರಿ 7.30ರ ಸುಮಾರಿಗೆ ಅವರ ಸಹೋದರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗ ದಾಖಲಿಸಲಾಗಿತ್ತು.
ಕಬ್ಬಿಣದ ರಾಡ್ ಅಥವಾ ಅಂತಹುದೇ ವಸ್ತುವಿನಿಂದ ದಾಳಿ ನಡೆಸಿರಬಹುದಾಗಿದ್ದು, ಅಪರ್ಣಾರ ಕುಟುಂಬಕ್ಕೂ ಈ ದಾಳಿಯ ಹಿಂದಿನ ಉದ್ದೇಶವೇನು ಎನ್ನುವುದು ಗೊತ್ತಾಗಿಲ್ಲ. ಅಪರ್ಣಾ ವಾಯುವಿಹಾರಕ್ಕೆ ತೆರಳುವಾಗ ಮೊಬೈಲ್ ಮತ್ತು ಇತರ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಆಕೆಯನ್ನು ಯಾರಾರಾರೂ ದ್ವೇಷಿಸುತ್ತಿದ್ದರೇ ಎನ್ನುವುದು ತಮಗೆ ತಿಳಿದಿಲ್ಲ ಎಂದು ಭಾಟಿಯಾ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ದಿಲ್ಲಿಯ ಪಾರ್ಕ್‌ಗಳಲ್ಲಿ ಕನಿಷ್ಠ ನಾಲ್ಕು ಮಾರಣಾಂಂತಿಕ ಹಲ್ಲೆ ಘಟನೆಗಳು ನಡೆದಿವೆ ಎಂದು ಪೋಲಿಸರು ತಿಳಿಸಿದ್ದಾರೆ.