ಅರಣ್ಯದಲ್ಲಿ ಮಂಗಗಳೊಂದಿಗೆ ವಾಸವಾಗಿದ್ದ ಬಾಲಕಿ ಪತ್ತೆ

Update: 2017-04-06 13:56 GMT

ಬಹ್ರೈಚ್(ಉ.ಪ್ರ),ಎ.6: ಇಲ್ಲಿಯ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಮಂಗಗಳ ಗುಂಪಿನೊಂದಿಗೆ ವಾಸವಾಗಿದ್ದ ಎಂಟರ ಹರೆಯದ ಬಾಲಕಿರ್ಯೋಳು ಪತ್ತೆಯಾಗಿದ್ದು,ಥೇಟ್‌ಜಂಗಲ್ ಬುಕ್ ಕಥೆ ಮರುಕಳಿಸಿದಂತಾಗಿದೆ.

 ಕಳೆದ ಜನವರಿಯಲ್ಲಿ ಅಭಯಾರಣ್ಯದ ಮೋತಿಪುರ ವಲಯದಲ್ಲಿ ಮಂಗಗಳ ಗುಂಪಿನೊಂದಿಗಿದ್ದ ಈ ಬಾಲಕಿಯನ್ನು ಕಂಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದರಾದರೂ ಅದಕ್ಕೂ ಮುನ್ನ ಮಂಗಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸುವಂತಾಗಿತ್ತು.

ಸದ್ಯ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಯಾರೇ ಹತ್ತಿರ ಬಂದರೂ ದೊಡ್ಡದಾಗಿ ಅರಚುತ್ತಾಳೆ. ಇದರಿಂದಾಗಿ ಆಕೆಗೆ ಸೂಕ್ತ ಚಿಕಿತ್ಸೆ ನಿಡುವುದೂ ಸಮಸ್ಯೆಯಾಗಿದೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಡಿ.ಕೆ.ಸಿಂಗ್ ತಿಳಿಸಿದರು.

 ಬಾಲಕಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವಾದರೂ ಆಕೆ ಸುದೀರ್ಘ ಸಮಯದಿಂದ ಅರಣ್ಯದಲ್ಲಿ ಮಂಗಗಳ ಜೊತೆಗೆ ವಾಸವಾಗಿರುವಂತಿದೆ ಎಂದು ಎಎಸ್‌ಪಿ ದಿನೇಶ ತ್ರಿಪಾಠಿ ಹೇಳಿದರು.

ಕಳೆದ ಎರಡು ದಿನಗಳಲ್ಲಿ ಬಾಲಕಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಆಕೆಯ ವಿಚಿತ್ರ ಸ್ಥಿತಿ ಬಹಿರಂಗಗೊಂಡಿದೆ.

ಬಾಲಕಿಯನ್ನು ರಕ್ಷಿಸಿದಾಗ ಆಕೆಯ ಕೂದಲು ಮತ್ತು ಉಗುರುಗಳು ವಿಕಾರವಾಗಿ ಬೆಳೆದಿದ್ದವು. ಮೈಮೇಲೆಲ್ಲ ಗಾಯದ ಗುರುತುಗಳಿದ್ದವು. ಆಕೆಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಮತ್ತು ಹೆತ್ತವರನ್ನು ಪತ್ತೆ ಹಚ್ಚುವುದು ನಮ್ಮ ಈಗಿನ ಆದ್ಯತೆಯಾಗಿದೆ ಎಂದು ತ್ರಿಪಾಠಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News