×
Ad

ದಕ್ಷಿಣ ಕೊರಿಯದಿಂದ ಪ್ರಕ್ಷೇಪಕ ಕ್ಷಿಪಣಿ ಉಡಾವಣೆ

Update: 2017-04-06 21:13 IST

ಸಿಯೋಲ್ (ದಕ್ಷಿಣ ಕೊರಿಯ), ಎ. 6: ಸ್ವದೇಶದಲ್ಲೇ ಅಭಿವೃದ್ಧಿಪಡಿಸಲಾದ ಪ್ರಕ್ಷೇಪಕ ಕ್ಷಿಪಣಿಯೊಂದರ ಪ್ರಾಯೋಗಿಕ ಪರೀಕ್ಷೆಯನ್ನು ದಕ್ಷಿಣ ಕೊರಿಯ ಯಶಸ್ವಿಯಾಗಿ ನಡೆಸಿದೆ ಎಂದು ‘ಯೊನ್‌ಹಾಪ್’ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ. ಉತ್ತರ ಕೊರಿಯದ ಯಾವುದೇ ಭಾಗವನ್ನು ತಲುಪಬಲ್ಲ ವ್ಯಾಪ್ತಿಯನ್ನು ಈ ಕ್ಷಿಪಣಿ ಹೊಂದಿದೆ.

ಉತ್ತರ ಕೊರಿಯವು ಜಪಾನ್ ಸಮುದ್ರಕ್ಕೆ ಪ್ರಕ್ಷೇಪಕ ಕ್ಷಿಪಣಿಯನ್ನು ಹಾರಿಸಿದ ಒಂದು ದಿನದ ಬಳಿಕ ದಕ್ಷಿಣ ಕೊರಿಯದ ಕ್ಷಿಪಣಿ ಹಾರಾಟ ನಡೆದಿದೆ.

ಉತ್ತರ ಕೊರಿಯ ನಡೆಸಿದ ಕ್ಷಿಪಣಿ ಹಾರಾಟವನ್ನು ಚೀನಾ-ಅಮೆರಿಕ ಶೃಂಗ ಸಮ್ಮೇಳನಕ್ಕೆ ಮುನ್ನ ಅದು ವ್ಯಕ್ತಪಡಿಸಿದ ಅಸಮಾಧಾನ ಎಂಬುದಾಗಿ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಲ್ಲಿ ನಡೆಯಲಿರುವ ಅಮೆರಿಕ ಮತ್ತು ಚೀನಾ ಅಧ್ಯಕ್ಷರ ಮಾತುಕತೆಯಲ್ಲಿ ಉತ್ತರ ಕೊರಿಯವೇ ಪ್ರಧಾನ ವಿಷಯವಾಗಿರುತ್ತದೆ.

ದಕ್ಷಿಣ ಕೊರಿಯಕ್ಕೆ ಅಮೆರಿಕ ಬೆಂಗಾವಲು ನೀಡುತ್ತಿದ್ದು, ಅಲ್ಲಿ ಸಾವಿರಾರು ಅಮೆರಿಕನ್ ಸೈನಿಕರಿದ್ದಾರೆ.

800 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ದಕ್ಷಿಣ ಕೊರಿಯದ ಕ್ಷಿಪಣಿಯು ಉತ್ತರ ಕೊರಿಯಕ್ಕೆ ಪ್ರಬಲ ತಡೆಯಾಗಬಹುದು ಎಂದು ಚೀನಾದ ಉನ್ನತ ಸರಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಯೊನ್‌ಹಾಪ್ ವರದಿ ಮಾಡಿದೆ.

ಕ್ಷಿಪಣಿಯ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಇನ್ನಷ್ಟು ಪರೀಕ್ಷೆಗಳನ್ನು ನಡೆಸಿದ ಬಳಿಕ, ಅದನ್ನು ದಕ್ಷಿಣ ಕೊರಿಯವು ಈ ವರ್ಷ ಸೇನೆಗೆ ನಿಯೋಜಿಸಬಹುದು ಎಂದು ಸುದ್ದಿ ಸಂಸ್ಥೆ ಹೇಳಿದೆ.

ಕ್ಷಿಪಣಿಯನ್ನು ದೇಶದ ದಕ್ಷಿಣ ವಲಯದಿಂದ ಉಡಾಯಿಸಿದರೂ ಸಂಪೂರ್ಣ ಉತ್ತರ ಕೊರಿಯವನ್ನು ಅದು ಕ್ರಮಿಸಬಹುದಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News