×
Ad

ಸಿರಿಯ ರಾಸಾಯನಿಕ ದಾಳಿ: ಮೃತರ ಸಂಖ್ಯೆ 86ಕ್ಕೆ

Update: 2017-04-06 21:26 IST

ವಿಶ್ವಸಂಸ್ಥೆ, ಎ. 6: ಸಿರಿಯದಲ್ಲಿ ನಡೆದ ಭೀಕರ ರಾಸಾಯನಿಕ ದಾಳಿಯ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ರಶ್ಯಗಳು ಬುಧವಾರ ಪರಸ್ಪರ ಸಂಘರ್ಷದ ದಾರಿಯನ್ನು ತುಳಿದಿವೆ ಹಾಗೂ ಸಿರಿಯದ ವಿರುದ್ಧ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಉತ್ತರ ಸಿರಿಯದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಪಟ್ಟಣ ಖಾನ್ ಶೇಖೂನ್ ಮೇಲೆ ಮಂಗಳವಾರ ಮುಂಜಾನೆ ನಡೆದ ರಾಸಾಯನಿಕ ದಾಳಿಯಲ್ಲಿ ಕನಿಷ್ಠ 86 ಮಂದಿ ಮೃತಪಟ್ಟಿದ್ದಾರೆ ಹಾಗೂ ಸೆಳವಿಗೆ ಒಳಗಾಗಿದ್ದ ಹಾಗೂ ಬಾಯಿಯಲ್ಲಿ ನೊರೆ ಕಾರುತ್ತಿದ್ದ ಡಝನ್‌ಗಟ್ಟಳೆ ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಈ ಹಿಂದೆ 2013ರಲ್ಲಿ ಸಿರಿಯದಲ್ಲಿ ರಾಸಾಯನಿಕ ದಾಳಿಗಳು ನಡೆದಾಗ, ಬಶರ್ ಅಲ್ ಅಸದ್ ಆಡಳಿತದ ವಿರುದ್ಧ ಸೇನಾ ಕಾರ್ಯಾಚರಣೆಗೆ ಆದೇಶ ನೀಡದಂತೆ ಟ್ರಂಪ್ ಅಂದಿನ ಅಧ್ಯಕ್ಷ ಬರಾಕ್ ಒಬಾಮರನ್ನು ಬಲವಾಗಿ ಒತ್ತಾಯಿಸಿದ್ದರು.

ಸಿರಿಯದ ಮಿತ್ರದೇಶ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಸಂಬಂಧವನ್ನು ಸುಧಾರಿಸುವ ಹಾಗೂ ಸಿರಿಯದಲ್ಲಿ ಐಸಿಸ್‌ನ್ನು ನಿರ್ಮೂಲಗೊಳಿಸುವ ಏಕೈಕ ಉದ್ದೇಶಕ್ಕೆ ಸಿರಿಯ ಕಾರ್ಯಾಚರಣೆಯನ್ನು ಮಿತಿಗೊಳಿಸುವ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದಿದ್ದಾರೆ.

ಆದರೆ, ಬುಧವಾರ ಸಿರಿಯದ ಮಕ್ಕಳು ಹಿಂಸಾತ್ಮಕವಾಗಿ ಸಾಯುತ್ತಿರುವ ವೀಡಿಯೊಗಳನ್ನು ನೋಡಿದ ಬಳಿಕ, ಸಿರಿಯ ಸಂಘರ್ಷದ ಕುರಿತ ತನ್ನ ನಿಲುವು ಬದಲಾಗಿದೆ ಎಂದು ಅವರು ಘೋಷಿಸಿದ್ದಾರೆ.

‘‘ಸಿರಿಯದ ರಾಸಾಯನಿಕ ದಾಳಿ ಎಲ್ಲ ಮಿತಿಗಳನ್ನು ದಾಟಿದೆ’’ ಎಂದು ಶ್ವೇತಭವನದಲ್ಲಿ ಬುಧವಾರ ಜೋರ್ಡಾನ್ ದೊರೆ ಅಬ್ದುಲ್ಲಾ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ಅಮಾಯಕ ಮಕ್ಕಳು, ಅಮಾಯಕ ಶಿಶುಗಳು ಮತ್ತು ಪುಟ್ಟ ಹಸುಳೆಗಳನ್ನು ನೀವು ಕೊಲ್ಲುವಾಗ, ನೀವು ಎಲ್ಲ ಮಿತಿಗಳನ್ನು ದಾಟಿದ್ದೀರಿ’’ ಎಂದು ಅವರು ಎಚ್ಚರಿಸಿದರು.

ಅಸಾದ್‌ಗೆ ಬೆಂಬಲ ಮರುಪರಿಶೀಲಿಸಿ : ರಶ್ಯಕ್ಕೆ ಟಿಲರ್‌ಸನ್ ಕರೆ

ಸಿರಿಯದ ವಿರುದ್ಧ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳುವ ಎಚ್ಚರಿಕೆಯನ್ನು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ನೀಡಿದ್ದಾರೆ. ಅದೇ ವೇಳೆ, ಅಸಾದ್‌ಗೆ ನೀಡುತ್ತಿರುವ ಬೆಂಬಲವನ್ನು ಪುನರ್‌ಪರಿಶೀಲನೆ ನಡೆಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ರಶ್ಯವನ್ನು ಒತ್ತಾಯಿಸಿದ್ದಾರೆ.

‘‘ಈ ಭಯಾನಕ ದಾಳಿಗೆ ಬಶರ್ ಅಲ್ ಅಸದ್ ನೇತೃತ್ವದ ಸಿರಿಯ ಸರಕಾರವೇ ಜವಾಬ್ದಾರಿ ಎಂಬ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ’’ ಎಂದು ಟಿಲರ್‌ಸನ್ ಸುದ್ದಿಗಾರರಿಗೆ ತಿಳಿಸಿದರು.

‘‘ಸಾಮೂಹಿಕವಾಗಿ ಕಾರ್ಯಾಚರಿಸುವ ತನ್ನ ಕರ್ತವ್ಯದಲ್ಲಿ ವಿಶ್ವಸಂಸ್ಥೆ ನಿರಂತರವಾಗಿ ವಿಫಲವಾದಾಗ, ಸದಸ್ಯ ದೇಶಗಳು ಒಬ್ಬಂಟಿಯಾಗಿ ತಮ್ಮದೇ ಆದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ’’ ಎಂದು ವಿಶ್ವಸಂಸ್ಥೆಯಲ್ಲಿ ನಿಕ್ಕಿ ಹೇಲಿ ಹೇಳಿದರು.

ರಾಸಾಯನಿಕ ದಾಳಿಯ ಹಿನ್ನೆಲೆಯಲ್ಲಿ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಕರೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಿರಿಯದ ರಕ್ಷಣೆಗೆ ಧಾವಿಸಿದ ರಶ್ಯ

ರಾಸಾಯನಿಕ ದಾಳಿಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿ ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವೊಂದನ್ನು ಮಂಡಿಸಿವೆ.

ರಶ್ಯ ಮತ್ತು ಇರಾನ್‌ಗಳು ಸಿರಿಯದ ಪ್ರಮುಖ ರಾಜತಾಂತ್ರಿಕ ಮತ್ತು ಸೇನಾ ಭಾಗೀದಾರ ದೇಶಗಳಾಗಿವೆ. ಸಿರಿಯದ ಪರವಾಗಿ ನಿಂತಿರುವ ರಶ್ಯ, ಕರಡು ನಿರ್ಣಯವು ‘ಸಂಪೂರ್ಣ ಅಸ್ವೀಕಾರಾರ್ಹ’ ಎಂದು ಹೇಳಿದೆ.

ನಿರ್ಣಯದ ವಿಷಯ ತನಗೆ ಸಮ್ಮತವಾಗದಿದ್ದರೆ ರಶ್ಯ ನಿರ್ಣಯದ ವಿರುದ್ಧವಾಗಿ ವೀಟೊ ಚಲಾಯಿಸಬಹುದಾಗಿದೆ. ಸಿರಿಯದ ವಿರುದ್ಧ ವಿಶ್ವಸಂಸ್ಥೆ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಲು ಈಗಾಗಲೇ ಏಳು ಬಾರಿ ವೀಟೊ ಚಲಾಯಿಸಿದೆ.

ಮಾರಕ ರಾಸಾಯನಿಕ ಅನಿಲ

ಸಿರಿಯದ ಸರಕಾರಿ ಪಡೆಗಳು 2013ರಲ್ಲಿ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿ ಪ್ರಯೋಗಿಸಿದೆ ಎಂದು ಭಾವಿಸಲಾಗಿರುವ ‘ಸರಿನ್’ ಮುಂತಾದ ನರ್ವ್ ಏಜಂಟ್‌ಗಳ ಲಕ್ಷಣಗಳನ್ನು ಸಂತ್ರಸ್ತರು ತೋರಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಬಾರಿ ಯಾವ ಮಾದರಿಯ ರಾಸಾಯನಿಕಗಳನ್ನು ಬಳಸಲಾಗಿದೆ ಎಂಬುದನ್ನು ಅಮೆರಿಕದ ಅಧಿಕಾರಿಗಳು ಹೇಳಿಲ್ಲ. ಆದರೆ, ‘‘ಅತ್ಯಂತ ಮಾರಕ ಹಾಗೂ ಹೆಸರು ಕೇಳಿದರೆ ಆಘಾತಗೊಳ್ಳುವ ಅನಿಲವನ್ನು ದಾಳಿಯಲ್ಲಿ ಬಳಸಲಾಗಿದೆ’’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಿರಿಯದಲ್ಲಿ ಆಂತರಿಕ ಯುದ್ಧ ಆರಂಭಗೊಂಡಂದಿನಿಂದ ನಡೆದ ಭೀಕರ ರಾಸಾಯನಿಕ ದಾಳಿಗಳ ಪಟ್ಟಿಯಲ್ಲಿ ಹಾಲಿ ದಾಳಿಯೂ ದಾಖಲಾಗಲಿದೆ.

2011ರ ಮಾರ್ಚ್‌ನಲ್ಲಿ ಆರಂಭಗೊಂಡ ಸಿರಿಯ ಸಂಘರ್ಷದಲ್ಲಿ ಈವರೆಗೆ 3.2 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ವಿಮಾನದಿಂದ ರಾಸಾಯನಿಕ ಬಾಂಬ್‌ಗಳು ಉದುರುತ್ತಿದ್ದವು: ಸಂತ್ರಸ್ತರು

ತಮ್ಮ ಮೇಲೆ ರಾಸಾಯನಿಕ ಬಾಂಬ್‌ಗಳನ್ನು ವಿಮಾನಗಳಿಂದ ಉದುರಿಸಲಾಯಿತು ಎಂಬುದಾಗಿ ಸಿರಿಯದ ವಿಷಾನಿಲ ದಾಳಿಯ ಸಂತ್ರಸ್ತರು ಬಣ್ಣಿಸಿದ್ದಾರೆ.

ತಾನು ಯಾವುದೇ ರಾಸಾಯನಿಕ ದಾಳಿಯನ್ನು ನಡೆಸಿಲ್ಲ ಎಂದು ಸಿರಿಯ ಹೇಳಿದರೆ, ‘ಭಯೋತ್ಪಾದಕ’ರ ರಾಸಾಯನಿಕ ಅಸ್ತ್ರಗಳ ಕಾರ್ಖಾನೆಯೊಂದರ ಮೇಲೆ ಬಾಂಬ್ ಬಿದ್ದಾಗ ಅಲ್ಲಿಂದ ವಿಷಾನಿಲ ಸೋರಿಕೆಯಾಗಿದೆ ಎಂಬುದಾಗಿ ರಶ್ಯ ಹೇಳಿಕೊಂಡಿದೆ.

ಆದರೆ, ಸಂತ್ರಸ್ತರು ಇದಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ.

 ಆಕಾಶದಿಂದ ರಾಸಾಯನಿಕ ಬಾಂಬ್‌ಗಳು ಉದುರುತ್ತಿರುವುದನ್ನು ತಾವು ನೋಡಿದ್ದೇವೆ ಎಂದು ಟರ್ಕಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರು ‘ಸಿಎನ್‌ಎನ್’ ಸುದ್ದಿಜಾಲಕ್ಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News