ರಾಷ್ಟ್ರದ ಶ್ರೇಷ್ಠ ಕಾಲೇಜುಗಳಲ್ಲಿ ಅಲೋಶಿಯಸ್‌ಗೆ 44ನೆ ರ್ಯಾಂಕ್

Update: 2017-04-06 18:35 GMT

ಮಂಗಳೂರು, ಎ.6: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಸಂಸ್ಥೆಗಳ ರ್ಯಾಂಕಿಂಗ್ ಚೌಕಟ್ಟಿನಲ್ಲಿ ಸ್ವಾಯತ್ತ ಸಂತ ಅಲೋಶಿಯಸ್ ಕಾಲೇಜು ರಾಷ್ಟ್ರದ ಶ್ರೇಷ್ಠ ಕಾಲೇಜುಗಳಲ್ಲಿ 44ನೆ ರ್ಯಾಂಕ್ ಪಡೆದುಕೊಂಡಿದೆ. ಇದೇ ವೇಳೆ ರಾಜ್ಯದಲ್ಲಿ 2ನೆ ಸ್ಥಾನದಲ್ಲಿದೆ. 

ದೇಶದ ಸುಮಾರು 45,000 ಕಾಲೇಜುಗಳಲ್ಲಿ ಅಲೋಶಿಯಸ್ ಕಾಲೇಜಿಗೆ ಈ ರ್ಯಾಂಕ್ ಲಭ್ಯವಾಗಿದ್ದು, ಕಾಲೇಜಿನ ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿಂದು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಸ್ವೀಬರ್ಟ್ ಡಿಸಿಲ್ವಾ ತಿಳಿಸಿದ್ದಾರೆ.

ವಿದ್ಯಾರ್ಥಿ ಪ್ರತಿಭೆ, ಮಾಡಿರುವ ಸಾಧನೆಗಳು, ಶೈಕ್ಷಣಿಕ ಸಾಧನೆಗಳು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದ ಗುಣಮಟ್ಟ, ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ಸಂಶೋಧನಾ ಲೇಖನಗಳ ಪ್ರಕಟನೆ, ಮೂಲ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಅನುಷ್ಠಾನ ಮೊದಲಾದ ಅನೇಕ ಕ್ಷೇತ್ರಗಳ ವೌಲ್ಯಮಾಪನ ಮಾಡಿ ಈ ರ್ಯಾಂಕ್ ನೀಡಲಾಗಿದೆ ಎಂದವರು ಹೇಳಿದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಉನ್ನತ ಶಿಕ್ಷಣಗಳ ರ್ಯಾಂಕ್ ಘೋಷಣೆ ಮಾಡುವ ಸಂದರ್ಭ ಇಂತಹ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ಹಾಗೂ ಹೆಚ್ಚಿನ ಸ್ವಾಯತ್ತತೆ ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಕಾಲೇಜು ಸ್ವಾಗತಿಸುತ್ತದೆ ಎಂದವರು ಹೇಳಿದರು.

2007ರಲ್ಲಿ ಸ್ವಾಯತ್ತೆಯನ್ನು ಪಡೆದ ನಂತರ ಸಂತ ಅಲೋಶಿಯಸ್ ಕಾಲೇಜು ಗಣನೀಯ ಸಾಧನೆಗಳನ್ನು ಮಾಡಿದೆ. ನ್ಯಾಕ್ ವತಿಯಿಂದ ಕಳೆದ 12 ವರ್ಷಗಳಲ್ಲಿ ಮೂರು ಬಾರಿ ನಡೆದಿರುವ ವೌಲ್ಯಮಾಪನದಲ್ಲಿ ಪ್ರತಿಬಾರಿ ಶ್ರೇಷ್ಠ ದರ್ಜೆ ಪಡೆದಿರುವುದಲ್ಲದೆ ಗುಣಮಟ್ಟ ಹೆಚ್ಚಿಸುವಲ್ಲಿ ಗಣನೀಯ ಸಾಧನೆ ಮಾಡಿದೆ. ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಕಾಲೇಜಿನ ಸ್ಟಾರ್ ಕಾಲೇಜು ದರ್ಜೆಯನ್ನು ಸ್ಟಾರ್ ಸ್ಟೇಟಸ್ ಕಾಲೇಜು ಎಂದು ಉನ್ನತೀಕರಿಸಿದೆ. ಉದ್ಯೋಗಾಧಾರಿತ ನವೀನ ರೀತಿಯ ಬಿ.ವೋಕ್ ಪದವಿಗಳನ್ನು ಆರಂಭಿಸಲು ದೀನ ದಯಾಳ್ ಕೌಶಲ್ಯ ಕೇಂದ್ರ ಎಂದು ಯುಜಿಸಿ ಕಾಲೇಜಿಗೆ ಮಾನ್ಯತೆ ನೀಡಿದೆ.

ರಾಷ್ಟ್ರದ ಸಾವಿರಾರು ಕಾಲೇಜುಗಳಲ್ಲಿ ಕೇವಲ 48 ಕಾಲೇಜುಗಳಿಗೆ ಈ ಸೌಲಭ್ಯ ನೀಡಲಾಗಿರುವುದು ಇಲ್ಲಿ ಗಮನಾರ್ಹ ಸಂಗತಿ ಎಂದವರು ನುಡಿದರು. 137 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ ವಿದ್ಯಾರ್ಥಿ ಕೇಂದ್ರೀಕೃತವಾಗಿರುವ 30ಕ್ಕೂ ಹೆಚ್ಚಿನ ಪದವಿ ಕೋರ್ಸ್‌ಗಳು, 17 ಸ್ನಾತಕೋತ್ತರ ಕೋರ್ಸ್ ಗಳು, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿದೆ. ಕಾಲೇಜಿನ ಎರಡು ಕ್ಯಾಂಪಸ್‌ಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆಡಳಿತ ವರ್ಗ ಕಾಲೇಜನ್ನು ಇದೀಗ ವಿಶ್ವವಿದ್ಯಾನಿಲಯ ದರ್ಜೆಗೆ ಉನ್ನತೀಕರಿಸಲು ಪರಿಶೀಲಿಸುತ್ತಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ನಾತಕೋತ್ತರ ಮಟ್ಟದಲ್ಲಿ ಎಂಎಸ್ಸಿ ಬಿಗ್ ಡಾಟಾ ಎನಾಲಿಸ್ಟಿಕ್ಸ್, ಎಂಎಸ್ಸಿ ಫುಡ್ ಸಯನ್ಸ್, ನ್ಯೂಟ್ರಿಶಿಯನ್ ಆ್ಯಂಡ್ ಡಯಟಿಕ್ಸ್ ಹಾಗೂ ಪದವಿ ಮಟ್ಟದಲ್ಲಿ ಪರ್ಫೋಮಿಂಗ್ ಆಟ್ಸ್ ವಿಷಯಗಳನ್ನು ಅಳವಡಿಸಲು ಪ್ರಸ್ತಾಪ ಸಲ್ಲಿಸಲಾಗಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಸಂಸ್ಥೆಗಳ ಮುಖ್ಯಸ್ಥ ರೆ.ಫಾ.ಡೈನೀಶಿಯಸ್ ವಾಝ್, ನಿಯೋಜಿತ ಪ್ರಾಂಶುಪಾಲ ರೆ.ಫಾ.ಪ್ರವೀಣ್ ಮಾರ್ಟಿಸ್, ಕುಲಸಚಿವ ಡಾ.ಎ.ಎಂ. ನರಹರಿ, ಐಕ್ಯೂಎಸಿ ಸಂಚಾಲಕ ಡಾ. ಡೆನ್ನಿಸ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News