‘ನರೇಗಾ ನಡಿಗೆ ಪ್ರಗತಿಯೆಡೆಗೆ’: ಕರಪತ್ರಗಳ ಬಿಡುಗಡೆ

Update: 2017-04-06 18:39 GMT

 ಮಂಗಳೂರು, ಎ.6: ದ.ಕ. ಜಿಪಂ ವತಿಯಿಂದ ನರೇಗಾ ಅನುದಾನವನ್ನು ಬಳಸಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವ ಅಭಿವೃದ್ಧಿ ಕಾರ್ಯಗಳ ಕುರಿತ ‘ನರೇಗಾ ನಡಿಗೆ ಪ್ರಗತಿಯೆಡೆಗೆ ಯೋಜನೆ’ ಬ್ರೋಶರ್ (ಕರಪತ್ರ)ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು.

ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿಂದು ನಡೆದ ಕೆಡಿಪಿ ಸಭೆಯಲ್ಲಿ ಬ್ರೋಶರ್‌ಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ದ.ಕ. ಜಿಲ್ಲೆಯಲ್ಲಿ 2018-19ನೆ ಸಾಲಿನಲ್ಲಿ 1,000 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆಯಲ್ಲಿ ಜಲಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಒತ್ತುನೀಡಲಾಗಿದೆ. ಪ್ರತಿ ಗ್ರಾಪಂನಲ್ಲಿ 5 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ಇದಕ್ಕೆ ‘ಜಲಧಾರೆ’ ಎಂದು ಹೆಸರಿಸಲಾಗಿದೆ. ಬಂಟ್ವಾಳದಲ್ಲಿ 290, ಬೆಳ್ತಂಗಡಿ 240, ಮಂಗಳೂರು 275, ಪುತ್ತೂರು 205 ಮತ್ತು ಸುಳ್ಯದಲ್ಲಿ 140 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಒಟ್ಟು 191 ಕೋ.ಲೀ. ನೀರು ಸಂಗ್ರಹವಾಗುವ ನಿರೀಕ್ಷೆಯಿದೆ. ಪ್ರತಿ ಕಿಂಡಿ ಅಣೆಕಟ್ಟುಗಳಿಗಾಗಿ 2.32ರಿಂದ 5 ಲಕ್ಷ ರೂ.ವರೆಗೆ ಅನುದಾನ ಬಳಸಿಕೊಳ್ಳಲು ಅವಕಾಶವಿದೆ.

ಈ ಯೋಜನೆಯು ಮಾ.7ರಿಂದ ಪ್ರಾರಂಭವಾಗಲಿದ್ದು, 2018ರ ಮಾರ್ಚ್‌ನೊಳಗೆ ಪೂರ್ಣಗೊಳಿಸುವ ಗುರಿಯಿದೆ. ಒಟ್ಟು 43 ಕೋ.ರೂ. ನರೇಗಾ ಅನುದಾನ ಬಳಕೆಯ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಒ ಡಾ.ಎಂ.ಆರ್.ರವಿ ತಿಳಿಸಿದರು.

ನರೇಗಾ ಯೋಜನೆಯಲ್ಲಿ ರೂಪಿಸಿರುವ ಇನ್ನೊಂದು ಯೋಜನೆ ಜಲಾಮೃತದಲ್ಲಿ ಸಣ್ಣ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಮಳೆನೀರು ಕೊಯ್ಲು ಘಟಕಗಳ ಸ್ಥಾಪನೆ, ಕೃಷಿ ಹೊಂಡಗಳ ರಚನೆ, ಸಾರ್ವಜನಿಕ, ಖಾಸಗಿ ಕೊಳವೆ ಬಾವಿಗಳ ಮರುಪೂರಣ, ಇಂಗುಬಾವಿ ನಿರ್ಮಾಣ, ಅರಣ್ಯೀಕರಣ, ಸಾರ್ವಜನಿಕ ಕೆರೆಗಳ ಪುನಶ್ಚೇತನ ಮುಂತಾದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಯಲ್ಲಿ ವೈಯಕ್ತಿಕ ಅರ್ಹ ಲಾನುಭವಿಗಳ ಜಮೀನುಗಳಲ್ಲಿ ಬಾವಿ ರಚನೆಗೆ ಒಟ್ಟು 55,000ರೂ. ಸಹಾಯಧನ ನೀಡಲಾಗುತ್ತಿದ್ದು, ಇದರಿಂದ ಒಟ್ಟು 230 ಮಾನವ ದಿನಗಳಾಗಲಿವೆ. ಸಾರ್ವಜನಿಕ ತೆರೆದ ಬಾವಿ ರಚನೆಗೆ 1,60,000 ರೂ. ಸಹಾಯಧನ ನೀಡಲಾಗುವುದು ಎಂದರು.

ಅಂಗನವಾಡಿ, ಶಾಲೆ, ಗ್ರಾಮಾಂತರ ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಘಟಕ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. 15,0000 ಲೀ. ಸಾಮರ್ಥ್ಯದ ಘಟಕ ರಚನೆಗೆ 1,15,000 ರೂ., 25 ಸಾ.ಲೀ. ಸಾಮರ್ಥ್ಯದ ಘಟಕ ರಚನೆಗೆ 1,50,000 ರೂ. 35 ಸಾವಿರ ಲೀ. ಘಟಕ ನಿರ್ಮಾಣಯಕ್ಕೆ 1,85,000 ರೂ. ನೆರವು ನೀಡಲಾಗುತ್ತಿದೆ ಎಂದರು.

ಅಲ್ಲದೆ ಮನೆ ನಿರ್ಮಾಣ, ಪಶು ಸೌಭಾಗ್ಯ, ಹಟ್ಟಿ ನಿರ್ಮಾಣ, ಅಂಗನವಾಡಿ ನಿರ್ಮಾಣ, ಪೌಷ್ಟಿಕ ತೋಟ ನಿರ್ಮಾಣ, ತೋಟಗಾರಿಕಾ ಚಟುವಟಿಕೆಗೂ ಅವಕಾಶಗಳಿವೆ. ನರೇಗಾ ಯೋಜನೆಯಲ್ಲಿ 2017- 18ನೆ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ಒಟ್ಟು 100 ಕೋ.ರೂ. ಅನುದಾನ ಬಳಕೆ ಮಾಡಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಒಟ್ಟು 90,000 ಜಾಬ್ ಕಾರ್ಡ್‌ಗಳಿವೆ. ಕಳೆದ ವರ್ಷ 56.13 ಕೋ.ರೂ. ಅನುದಾನ ಬಳಸಿಕೊಳ್ಳಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News