×
Ad

ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ

Update: 2017-04-07 09:07 IST

ವಾಷಿಂಗ್ಟನ್, ಎ.7: ಸಿರಿಯಾದಲ್ಲಿ ರಾಸಾಯನಿಕ ದಾಳಿ ನಡೆಸಿದ ಕ್ರಮಕ್ಕೆ ಪ್ರತೀಕಾರವಾಗಿ ಸಿರಿಯಾದ ವಾಯುನೆಲೆಯ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಿರಿಯಾ ಜನಾಂಗೀಯ ಕಲಹದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.

ನಾಗರಿಕರ ಮೇಲೆ ಒಂದು ವಾರದಿಂದ ರಾಸಾಯನಿಕ ದಾಳಿ ನಡೆಸುತ್ತಿರುವ ಕ್ರಮಕ್ಕೆ ಪ್ರತೀಕಾರವಾಗಿ ಗುರುವಾರ ರಾತ್ರಿ ಯುದ್ಧ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಪ್ರಕಟಿಸಿದೆ. ಸಿರಿಯಾ ಸರ್ಕಾರದ ಮೇಲೆ ಅಮೆರಿಕ ಮೊದಲ ಬಾರಿಗೆ ನೇರ ಪ್ರಹಾರ ನಡೆಸಿದೆ.

 ಸರ್ಕಾರದ ನಿಯಂತ್ರಣದಲ್ಲಿರುವ ಕೇಂದ್ರ ಸಿರಿಯಾದ ಶಾಯರತ್ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಅಮೆರಿಕ ಕಾಲಮಾನದ ಪ್ರಕಾರ ರಾತ್ರಿ 8:45ಕ್ಕೆ ದಾಳಿ ನಡೆದಿದ್ದು, ಸಿರಿಯಾ ಕಾಲಮಾನದ ಪ್ರಕಾರ ಶುಕ್ರವಾರ ನಸುಕಿನಲ್ಲಿ ಈ ದಾಳಿ ನಡೆದಿದೆ. ರಾಸಾಯನಿಕಗಳನ್ನು ಸುರಿದ ಸಿರಿಯಾ ಸೇನಾ ವಿಮಾನವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಅಮೆರಿಕ ಪ್ರಕಟಿಸಿದೆ.

ಸಿರಿಯಾ ಜನಾಂಗೀಯ ಕಲಹದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದನ್ನು ಹಿಂದೆ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಅವಧಿಯಲ್ಲಿ ವಿರೋಧಿಸಿದ್ದ ಟ್ರಂಪ್ ಅವರ ಹೊಸ ನಡೆ ಅಚ್ಚರಿಗೆ ಕಾರಣವಾಗಿದೆ. ಆದರೆ ರಾಸಾಯನಿಕ ದಾಳಿಯಲ್ಲಿ ಮಕ್ಕಳು ಮೃತಪಟ್ಟ ಚಿತ್ರಗಳನ್ನು ನೋಡಿ ಮನ ಕರಗಿದ ಟ್ರಂಪ್ ಇದನ್ನು ಮಾನವತೆಯ ತೇಜೋವಧೆ ಎಂದು ಬಣ್ಣಿಸಿ ದಾಳಿಗೆ ನಿರ್ಧರಿಸಿದರು ಎಂದು ಉನ್ನತ ಮೂಲಗಳು ಹೇಳಿವೆ.

ಅಮೆರಿಕದ ಸುಮಾರು 60 ತೊಮಾಹಕ್ ಕ್ಷಿಪಣಿಗಳನ್ನು ಮೆಡಿಟರೇನಿಯನ್ ಸಮುದ್ರದ ಯುದ್ಧನೌಕೆಗಳಿಂದ ಹಾರಿಸಲಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ಅಧಿಕಾರಿಗಳು ಗುರುವಾರ ಸಿರಿಯಾಗೆ ಎಚ್ಚರಿಕೆ ನೀಡಿದ್ದರೂ ದಾಳಿಯ ಸುಳಿವು ಬಿಟ್ಟುಕೊಟ್ಟಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News