×
Ad

ಕರುವಿಗೆ ಡಿಕ್ಕಿ ಹೊಡೆದು 20 ಮೀಟರ್ ದೂರಕ್ಕೆ ಎಳೆದೊಯ್ದ ಹಿಂದು ಯುವವಾಹಿನಿ ನಾಯಕನ ಕಾರು

Update: 2017-04-07 15:16 IST
ಸಾಂದರ್ಭಿಕ ಚಿತ್ರ

ಲಕ್ನೋ,ಎ.7: ಲಕ್ನೋ ಜಿಲ್ಲಾ ಹಿಂದು ಯುವವಾಹಿನಿ (ಎಚ್‌ವೈವಿ)ಯ ಸಂಚಾಲಕನ ಕಾರು ಎಳೆಯ ಕರುವೊಂದಕ್ಕೆ ಡಿಕ್ಕಿ ಹೊಡೆದು ಅದನ್ನು ಸುಮಾರು 20 ಮೀ.ದೂರ ಎಳೆದೊಯ್ದ ಘಟನೆ ನಗರದ ಜಾನಕಿಪುರಂ ಬಡಾವಣೆಯ ನಿವಡಾ ಪ್ರದೇಶದಲ್ಲಿ ನಡದಿದೆ. ಗೋರಕ್ಷಣೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಅವರು ಸ್ಥಾಪಿಸಿರುವ ಎಚ್‌ವೈವಿಯ ಮುಖ್ಯ ಧ್ಯೇಯಗಳಲ್ಲೊಂದಾಗಿದೆ.

ಕರುವಿನ ಒಡತಿ,ನಿವಡಾ ನಿವಾಸಿ ರಾಜರಾಣಿ ನೀಡಿರುವ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಬುಧವಾರ ರಾತ್ರಿ 7.30ರ ಸುಮಾರಿಗೆ ನಿವಡಾದ ಮದ್ಯದಂಗಡಿಯೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ಗುಂಪೊಂದು ಕಾರಿನಲ್ಲಿ ಕುಳಿತಿದ್ದು, ಚಾಲಕ ಅದನ್ನು ಚಲಾಯಿಸಿದಾಗ ಅದು ಅಲ್ಲಿಯೇ ಹಸುವಿನ ಜೊತೆಗೆ ಕಟ್ಟಿಹಾಕಿದ್ದ ಕರುವಿಗೆ ಡಿಕ್ಕಿ ಹೊಡೆದಿದೆ. ಕರುವನ್ನು ಎಳೆದುಕೊಂಡೇ ಸುಮಾರು 20 ಮೀಟರ್ ದೂರಕ್ಕೆ ಸಾಗಿದ ಕಾರು ತಿರುವಿನಲ್ಲಿ ಮುಂದಕ್ಕೆ ರಸ್ತೆಯಿಲ್ಲದೆ ನಿಂತುಕೊಂಡಿತ್ತು. ಈ ವೇಳೆಗಾಗಲೇ ಕರು ಸಾವನ್ನಪ್ಪಿತ್ತು. ಅಲ್ಲಿದ್ದ ಕೆಲವು ಸ್ಥಳೀಯರು ಓಡಿ ಬರುವಷ್ಟರಲ್ಲಿ ಕಾರಿನಲ್ಲಿದ್ದವರು ಅದನ್ನು ಅಲ್ಲೇ ತೊರೆದು ಪರಾರಿಯಾಗಿದ್ದರು. ಕಾರಿನಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿವೆ.

ಈ ಘಟನೆಯಿಂದ ಆಕ್ರೋಶಿತ ಸ್ಥಳೀಯರು ಕಾರಿಗೆ ಹಾನಿಯನ್ನುಂಟು ಮಾಡಿದ್ದಲ್ಲದೆ ಮದ್ಯದಂಗಡಿಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.

ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮಾಲಕನನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ಇದಕ್ಕಾಗಿ ಆರ್‌ಟಿಒ ನೆರವು ಕೇಳಿದ್ದೇವೆ. ಮಾಲಕ ಯಾರೆಂದು ಗೊತ್ತಾದರೆ ಅಪಘಾತದ ವೇಳೆ ಕಾರು ಯಾರು ಚಲಾಯಿಸುತ್ತಿದ್ದರು ಎನ್ನುವುದು ತಿಳಿದು ಬರಲಿದೆ ಎಂದು ಜಾನಕಿಪುರಂ ಠಾಣಾಧಿಕಾರಿ ಸತೀಶ ಕುಮಾರ ಸಿನ್ಹಾ ತಿಳಿಸಿದರು.

ಆದರೆ ಕಾರು ಎಚ್‌ವೈವಿಯ ಲಕ್ನೋ ಜಿಲ್ಲಾ ಸಂಚಾಲಕ ಅಖಂಡ ಪ್ರತಾಪ ಸಿಂಗ್‌ಗೆ ಸೇರಿದ್ದು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಗೇನೂ ಗೊತ್ತಿಲ್ಲ ಮತ್ತು ಈ ವಿಷಯವನ್ನು ಪರಿಶೀಲಿಸುತ್ತೇನೆ ಎಂದು ಗೋರಖ್‌ಪುರದಲ್ಲಿರುವ ಎಚ್‌ವೈವಿ ಕೇಂದ್ರಕಚೇರಿಯ ಉಸ್ತುವಾರಿ ಪಿ.ಕೆ.ಮಾಲಿ ಹೇಳಿದರು.

ಕಾರು ತನ್ನ ಸೋದರನಿಗೆ ಸೇರಿದ್ದೇನೋ ಹೌದು, ಆದರೆ ಬುಧವಾರ ಆತ ಸೀತಾಪುರಕ್ಕೆ ತೆರಳಿದ್ದು, ಘಟನೆ ನಡೆದಾಗ ಕಾರು ಬೇರೆಯವರ ಬಳಿಯಿತ್ತು ಎಂದು ಅಖಂಡ ಪ್ರತಾಪನ ಸೋದರಿ ಪ್ರಿಯಾಂಕಾ ಸಿಂಗ್ ಸುದ್ದಿಗಾರರಿಗೆ ತಿಳಿಸಿದಳು.

ಘಟನೆಯ ಹಿನ್ನೆಲೆಯಲ್ಲಿ ನಿವಡಾದ ಮದ್ಯದಂಗಡಿ ಗುರುವಾರ ಬಾಗಿಲೆಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News