ಚೀನಾ ಭೇಟಿ: ಆಹ್ವಾನ ಸ್ವೀಕರಿಸಿದ ಟ್ರಂಪ್
ಪಾಮ್ ಬೀಚ್ (ಫ್ಲೋರಿಡ), ಎ. 7: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಮೊದಲ ಬಾರಿಗೆ ಮುಖತಃ ಭೇಟಿಯಾದರು.ಸ್ವಲ್ಪ ಹೊತ್ತು ತಮ್ಮ ಪತ್ನಿಯರ ಜೊತೆಗೂಡಿ ಆತ್ಮೀಯ ಸಂಭಾಷಣೆ ನಡೆಸಿದ ಬಳಿಕ ಅವರು, ಜಟಿಲ ದ್ವಿಪಕ್ಷೀಯ ವಿಷಯಗಳತ್ತ ಹೊರಳಿದರು.
ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಸುವ ವ್ಯಾಪಾರ ಮತ್ತು ಭದ್ರತಾ ವಿಷಯಗಳು ಅವರು ದ್ವಿಪಕ್ಷೀಯ ಮಾತುಕತೆಗಳ ವೇಳೆ ಪ್ರಸ್ತಾಪಗೊಂಡವು.ಚೀನಾದ ವ್ಯಾಪಾರ ಹವ್ಯಾಸಗಳ ಕುರಿತಂತೆ ಅಮೆರಿಕದ ಕಳವಳ ಹಾಗೂ ಉತ್ತರ ಕೊರಿಯದ ಪರಮಾಣು ಮಹತ್ವಾಕಾಂಕ್ಷೆ ಮುಂತಾದ ವಿಷಯಗಳನ್ನು ಜಿನ್‌ಪಿಂಗ್ ಜೊತೆಗಿನ ಮಾತುಕತೆಯಲ್ಲಿ ಪ್ರಸ್ತಾಪಿಸುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಆ
ದಾಗ್ಯೂ, ಈ ವಿಷಯದಲ್ಲಿ ಹೆಚ್ಚಿನ ಮುನ್ನಡೆಯನ್ನು ಯಾರೂ ನಿರೀಕ್ಷಿಸುವುದಿಲ್ಲ.ಪಾಮ್‌ಬೀಚ್‌ನಲ್ಲಿರುವ ಸ್ಪಾನಿಶ್ ಮಾದರಿಯ ಮಾರ್-ಅ-ಲಾಗೊ ರಿಸಾರ್ಟ್‌ಗೆ ಕ್ಸಿ ಮತ್ತು ಅವರ ಪತ್ನಿ ಪೆಂಗ್ ಲಿಯುವನ್ ಆಗಮಿಸಿದಾಗ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಸ್ವಾಗತಿಸಿದರು.
ಉಭಯ ನಾಯಕರು ವ್ಯಾಪಾರ ಮತ್ತು ವಿದೇಶ ನೀತಿಗಳಿಗೆ ಸಂಬಂಧಿಸಿ ವಿಸ್ತೃತ ಮಾತುಕತೆಯನ್ನು ಶುಕ್ರವಾರ ನಡೆಸಲಿದ್ದಾರೆ.
ಬೀಜಿಂಗ್, ಎ. 7: ಚೀನಾಕ್ಕೆ ಭೇಟಿ ನೀಡುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೀಡಿರುವ ಆಹ್ವಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವೀಕರಿಸಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ಅಧಿಕಾರಿಗಳನ್ನು ಉಲ್ಲೇಖಿಸಿ ಶುಕ್ರವಾರ ವರದಿ ಮಾಡಿದೆ.
ಅಮೆರಿಕದ ಫ್ಲೋರಿಡದ ಪಾಮ್ ಬೀಚ್‌ನಲ್ಲಿರುವ ಟ್ರಂಪ್‌ರ ಮಾರ್-ಅ-ಲಾಗೊ ರಿಸಾರ್ಟ್‌ನಲ್ಲಿ ಟ್ರಂಪ್ ಜೊತೆ ಸಮಾಲೋಚನೆ ನಡೆಸುತ್ತಿರುವ ಕ್ಸಿ, ಈ ಆಹ್ವಾನ ನೀಡಿದ್ದಾರೆ.ಈ ಆಹ್ವಾನಕ್ಕೆ ಟ್ರಂಪ್ ‘ಸಂತೋಷ’ದಿಂದ ಒಪ್ಪಿದ್ದಾರೆ ಹಾಗೂ ಶೀಘ್ರದಲ್ಲೇ ಭೇಟಿ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಕ್ಸಿನುವಾ ತಿಳಿಸಿದೆ.
ವಾಶಿಂಗ್ಟನ್, ಎ. 7: ಅಮೆರಿಕ ಸೇನೆಯು ಗುರುವಾರ ತಡ ರಾತ್ರಿ ಸಿರಿಯ ಸೇನೆಯ ವಾಯುನೆಲೆಯೊಂದರ ಮೇಲೆ 59 ಕ್ಷಿಪಣಿಗಳನ್ನು ಹಾರಿಸಿದೆ. ಆರು ವರ್ಷಗಳ ಹಿಂದೆ ಸಿರಿಯದಲ್ಲಿ ಆಂತರಿಕ ಯುದ್ಧ ಆರಂಭಗೊಂಡ ಬಳಿಕ ಅಲ್ಲಿನ ಬಶರ್ ಅಲ್ ಅಸದ್ ಸರಕಾರದ ವಿರುದ್ಧ ಅಮೆರಿಕ ನಡೆಸಿದ ನೇರ ದಾಳಿ ಇದಾಗಿದೆ.
ಈ ವಾರ ಸಿರಿಯದಲ್ಲಿ ನಡೆದ, 80ಕ್ಕೂ ಅಧಿಕ ನಾಗರಿಕರನ್ನು ಬಲಿ ತೆಗೆದುಕೊಂಡ ರಾಸಾಯನಿಕ ಅಸ್ತ್ರ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ. ಇದರೊಂದಿಗೆ, ರಶ್ಯ ಮತ್ತು ಇರಾನ್‌ಗಳ ವಿರುದ್ಧ ನೇರ ಸಂಘರ್ಷಕ್ಕಿಳಿಯುವ ಸಾಧ್ಯತೆಯನ್ನು ಅಮೆರಿಕ ವಿಸ್ತರಿಸಿಕೊಂಡಂತಾಗಿದೆ.
ರಶ್ಯ ಮತ್ತು ಇರಾನ್‌ಗಳೆರಡೂ ಸಿರಿಯಕ್ಕೆ ಬೆಂಗಾವಲಾಗಿ ನಿಂತಿದ್ದು, ಬಂಡಾಯವನ್ನು ದಮನಿಸುವ ಅದರ ಯತ್ನಗಳಿಗೆ ಬೆಂಬಲ ನೀಡುತ್ತಿವೆ.