×
Ad

ಸಿರಿಯ ರಾಸಾಯನಿಕ ದಾಳಿ : ಸಮಯಸ್ಫೂರ್ತಿ ಮೆರೆದು ಬದುಕುಳಿದ ಸಾಹಸಿ

Update: 2017-04-07 19:31 IST

ಇದ್ಲಿಬ್ (ಸಿರಿಯ), ಎ. 7: ಸಿರಿಯದ ಇದ್ಲಿಬ್ ಪ್ರಾಂತದ ಖಾನ್ ಶೇಖೂನ್ ಪಟ್ಟಣದಲ್ಲಿ ಶಂಕಿತ ರಾಸಾಯನಿಕ ದಾಳಿ ನಡೆದ ಕ್ಷಣಗಳ ಬಳಿಕ ಅವರ ಕಾಲುಗಳಲ್ಲಿನ ಸ್ಪರ್ಶಜ್ಞಾನ ನಿಧಾನವಾಗಿ ಕಡಿಮೆಯಾಗುತ್ತಿತ್ತು. ಆ ಕ್ಷಣಗಳಲ್ಲಿ ಹಸನ್ ಯೂಸುಫ್ ತೋರಿದ ಸಮಯಸ್ಫೂರ್ತಿ ಅವರ ಜೀವವನ್ನು ಉಳಿಸಿತು, ಕಾಲುಗಳನ್ನಲ್ಲ.

‘‘ರಾಸಾಯನಿಕ ದಾಳಿಗಳು ನಡೆದಾಗ ಯಾರೂ ಬಾಂಬ್ ಆಶ್ರಯತಾಣಗಳಿಗೆ ಹೋಗಬಾರದು ಎಂದು ಟಿವಿಯಲ್ಲಿ ಹಾಗೂ ಇತರರು ಹೇಳುವುದನ್ನು ಕೇಳಿದ್ದೆ’’ ಎಂದು ಮಧ್ಯವಯಸ್ಕ ವ್ಯಕ್ತಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.‘‘ರಾಸಾಯನಿಕ ದಾಳಿ ನಡೆದಾಗ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹೋಗಬೇಕು’’ ಎಂದು ಅವರು ಹೇಳುತ್ತಾರೆ.

ಬಂಡುಕೋರರ ನಿಯಂತ್ರಣದಲ್ಲಿರುವ ಇದ್ಲಿಬ್ ಪ್ರಾಂತದ ಆಸ್ಪತ್ರೆಯೊಂದರಲ್ಲಿ ಅವರು ಮಲಗಿದ್ದಾರೆ. ಅವರ ನಿಶ್ಚಲ ಕಾಲುಗಳಿಗೆ ಬಿಳಿ ಬಟ್ಟೆಯನ್ನು ಸುತ್ತಲಾಗಿದೆ.ರಾಸಾಯನಿಕ ದಾಳಿಯಲ್ಲಿ ಕನಿಷ್ಠ 86 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.‘‘ಅದು ಸಾಮಾನ್ಯ ವಾಯು ದಾಳಿಯೆಂದು ನಾನು ಭಾವಿಸಿದ್ದೆ. ಆದರೆ, ಶೀಘ್ರವೇ ನನಗೆ ತಲೆ ಸುತ್ತಲು ಆರಂಭವಾಯಿತು.

ನನ್ನ ಎದುರಿನಲ್ಲೇ ಇಬ್ಬರು ಕುಸಿದು ಬಿದ್ದರು. ಆಗ ನನಗೆ ಗೊತ್ತಾಯಿತು ರಾಸಾಯನಿಕ ಅಸ್ತ್ರ ಪ್ರಯೋಗವಾಗಿದೆ ಎಂದು’’ ಎಂದರು.ಬಳಿಕ ಅವರು ತಡ ಮಾಡಲಿಲ್ಲ. ಸಮೀಪದ ಕಟ್ಟಡದತ್ತ ಧಾವಿಸಿದರು. ಇನ್ನಷ್ಟು ರಾಸಾಯನಿಕವನ್ನು ಸೇವಿಸುವ ಮೊದಲು ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹೋಗುವುದು ಅವರ ಗುರಿಯಾಗಿತ್ತು.‘‘ಕಟ್ಟಡದ ತುದಿಗೆ ಹೋಗುವುದರ ಹೊರತು ಬೇರೆ ಯಾವುದನ್ನೂ ನಾನು ಆ ಕ್ಷಣದಲ್ಲಿ ಯೋಚಿಸಲಿಲ್ಲ’’ ಎಂದರು.

ಕೆಲವು ಹೆಜ್ಜೆಗಳನ್ನು ಹತ್ತುವುದರಲ್ಲಿಯೇ ಅವರು ಕುಸಿದರು. ಬಳಿಕ ಕೈಗಳು ಮತ್ತು ಮೊಣಗಾಲುಗಳ ಮೂಲಕವೇ ಉಳಿದ ಮೆಟ್ಟಿಲುಗಳನ್ನು ಹತ್ತಿದರು.

 ‘‘ನನ್ನ ಇಡೀ ದೇಹ ಸ್ತಬ್ಧವಾಗಿತ್ತು. ಸ್ಪರ್ಶಜ್ಞಾನ ಕಡಿಮೆಯಾಗುತ್ತಿತ್ತು ಹಾಗೂ ಪ್ರಜ್ಞೆ ನಿಧಾನವಾಗಿ ತಪ್ಪುತ್ತಿತ್ತು. ನನ್ನ ಇಡೀ ದೇಹ ಸಂಪೂರ್ಣ ನಿಶ್ಚಲವಾದದ್ದು ನನ್ನ ಕೊನೆಯ ನೆನಪು. ನನ್ನ ಕೈಗಳನ್ನು ಹೊರತುಪಡಿಸಿ ಬೇರೇನೂ ಚಲಿಸುತ್ತಿರಲಿಲ್ಲ’’ ಎಂಬುದನ್ನು ಯೂಸುಫ್ ನೆನೆಸಿಕೊಂಡರು.
ಪ್ರಜ್ಞೆ ಬಂದಾಗ ನೆರೆಕರೆಯವರು ಅವರ ಸುತ್ತ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News