ಸಿರಿಯ ಮೇಲೆ ಅಮೆರಿಕ ದಾಳಿ : ವಾಯುನೆಲೆ ಗುರಿ; ವಿಮಾನಗಳು, ಮೂಲಸೌಕರ್ಯ ಧ್ವಂಸ
ವಾಶಿಂಗ್ಟನ್, ಎ. 7: ಅಮೆರಿಕ ಸೇನೆಯು ಗುರುವಾರ ತಡ ರಾತ್ರಿ ಸಿರಿಯ ಸೇನೆಯ ವಾಯುನೆಲೆಯೊಂದರ ಮೇಲೆ 59 ಕ್ಷಿಪಣಿಗಳನ್ನು ಹಾರಿಸಿದೆ. ಆರು ವರ್ಷಗಳ ಹಿಂದೆ ಸಿರಿಯದಲ್ಲಿ ಆಂತರಿಕ ಯುದ್ಧ ಆರಂಭಗೊಂಡ ಬಳಿಕ ಅಲ್ಲಿನ ಬಶರ್ ಅಲ್ ಅಸದ್ ಸರಕಾರದ ವಿರುದ್ಧ ಅಮೆರಿಕ ನಡೆಸಿದ ನೇರ ದಾಳಿ ಇದಾಗಿದೆ.
ಈ ವಾರ ಸಿರಿಯದಲ್ಲಿ ನಡೆದ, 80ಕ್ಕೂ ಅಧಿಕ ನಾಗರಿಕರನ್ನು ಬಲಿ ತೆಗೆದುಕೊಂಡ ರಾಸಾಯನಿಕ ಅಸ್ತ್ರ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ. ಇದರೊಂದಿಗೆ, ರಶ್ಯ ಮತ್ತು ಇರಾನ್‌ಗಳ ವಿರುದ್ಧ ನೇರ ಸಂಘರ್ಷಕ್ಕಿಳಿಯುವ ಸಾಧ್ಯತೆಯನ್ನು ಅಮೆರಿಕ ವಿಸ್ತರಿಸಿಕೊಂಡಂತಾಗಿದೆ.
ರಶ್ಯ ಮತ್ತು ಇರಾನ್‌ಗಳೆರಡೂ ಸಿರಿಯಕ್ಕೆ ಬೆಂಗಾವಲಾಗಿ ನಿಂತಿದ್ದು, ಬಂಡಾಯವನ್ನು ದಮನಿಸುವ ಅದರ ಯತ್ನಗಳಿಗೆ ಬೆಂಬಲ ನೀಡುತ್ತಿವೆ.
ಅಮೆರಿಕದ ‘ಮಹತ್ವದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ’ಯನ್ನು ಗಮನದಲ್ಲಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಹಾಗೂ ಸಿರಿಯದಲ್ಲಿನ ಹತ್ಯಾಕಾಂಡ ಮತ್ತು ರಕ್ತಪಾತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ‘ನಮ್ಮಿಂದಿಗೆ ಕೈಜೋಡಿಸುವಂತೆ ಎಲ್ಲ ನಾಗರಿಕ ದೇಶ’ಗಳಿಗೆ ಕರೆ ನೀಡಿದ್ದಾರೆ.
ಅದೇ ವೇಳೆ, ಎಲ್ಲ ಮಾದರಿಯ ಭಯೋತ್ಪಾದನೆಯನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ.
ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿರುವ ನೌಕಾಪಡೆಯ ಡೆಸ್ಟ್ರಾಯರ್‌ಗಳಾದ ಯುಎಸ್‌ಎಸ್ ರಾಸ್ ಮತ್ತು ಯುಎಸ್‌ಎಸ್ ಪೋರ್ಟರ್‌ಗಳಿಂದ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದೆ. ಹಾಮ್ಸ್ ಪ್ರಾಂತದಲ್ಲಿರುವ ಶಯ್ರಾತ್ ಎಂಬ ವಾಯುನೆಲೆಯೊಂದರ ಮೇಲೆ ಕ್ಷಿಪಣಿಗಳು ಅಪ್ಪಳಿಸಿವೆ.
ಇದ್ಲಿಬ್ ಪ್ರಾಂತದಲ್ಲಿ ರಾಸಾಯನಿಕ ದಾಳಿ ನಡೆಸಿದ ಸಿರಿಯದ ವಿಮಾನಗಳು ಇಲ್ಲಿಂದಲೇ ಹಾರಾಟ ನಡೆಸಿವೆ ಎಂದು ನಂಬಲಾಗಿದೆ. ವಾಯು ರಕ್ಷಣಾ ವ್ಯವಸ್ಥೆಗಳು, ವಿಮಾನಗಳು, ವಿಮಾನಗಳನ್ನು ಇಡುವ ಸ್ಥಳಗಳು ಮತ್ತು ಇಂಧನವನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗಿದೆ.
ದಾಳಿಯಿಂದಾಗಿ ಸಿರಿಯದ ವಿಮಾನಗಳು ಮತ್ತು ಬೆಂಬಲ ವ್ಯವಸ್ಥೆಗಳು ತೀವ್ರವಾಗಿ ಹಾನಿಗೊಂಡಿವೆ ಅಥವಾ ನಾಶವಾಗಿವೆ ಎಂದು ಅಮೆರಿಕದ ಸೇನೆ ತಿಳಿಸಿದೆ.
ಒಪ್ಪಂದಕ್ಕೆ ಬರಲು ಭದ್ರತಾ ಮಂಡಳಿ ವಿಫಲ
ವಿಶ್ವಸಂಸ್ಥೆ, ಎ. 7: ಸಿರಿಯದಲ್ಲಿ ನಡೆದ ರಾಸಾಯನಿಕ ದಾಳಿ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆನ್ನುವ ಬೇಡಿಕೆಗಳಿಗೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಬರಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ವಿಫಲವಾಗಿದೆ.
ರಹಸ್ಯ ಸಭೆಯಲ್ಲಿ ಭದ್ರತಾ ಮಂಡಳಿಯು, ತನಿಖೆಗೆ ಸಂಬಂಧಿಸಿ ಮೂರು ಪ್ರತ್ಯೇಕ ಕರಡು ನಿರ್ಣಯಗಳ ಬಗ್ಗೆ ಚರ್ಚಿಸಿತು. ಆದರೆ, ಯಾವುದೇ ನಿರ್ಣಯದ ಬಗ್ಗೆ ಮತದಾನ ನಡೆಯಲಿಲ್ಲ.
ಸಿರಿಯದಲ್ಲಿ ನಡೆದ ರಾಸಾಯನಿಕ ದಾಳಿಗೆ ಪ್ರತೀಕಾರವೆಂಬಂತೆ ಅಮೆರಿಕವು ಆ ದೇಶದ ವಾಯು ನೆಲೆಯೊಂದರ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಈ ಗೊಂದಲ ತಲೆದೋರಿದೆ.
ರಾಸಾಯನಿಕ ದಾಳಿಗೆ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್ ಕಾರಣ ಎಂಬುದಾಗಿ ಅಮೆರಿಕ ಆರೋಪಿಸಿದೆ.
ಅಮೆರಿಕದಿಂದ ಆಕ್ರಮಣ: ಸಿರಿಯ ಟಿವಿ
ಸಿರಿಯದ ವಾಯು ನೆಲೆಯೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯು ‘ಆಕ್ರಮಣ’ವಾಗಿದೆ ಎಂದುದ ಸಿರಿಯದ ಸರಕಾರಿ ಟಿವಿ ಶುಕ್ರವಾರ ಹೇಳಿದೆ.
‘‘ಸಿರಿಯದ ಸೇನಾ ನೆಲೆಗಳ ಮೇಲೆ ಅಮೆರಿಕ ಹಲವಾರು ಕ್ಷಿಪಣಿಗಳ ಮೂಲಕ ಆಕ್ರಮಣ ನಡೆಸಿದೆ’’ ಎಂದು ಟಿವಿ ತಿಳಿಸಿದೆ.ಈ ದಾಳಿಯಲ್ಲಿ ಸಾವುಗಳು ಸಂಭವಿಸಿವೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ.
‘‘ಖಾನ್ ಶೇಖೂನ್ ಪಟ್ಟಣದಲ್ಲಿ ನಡೆದ ಘಟನೆಯ ಬಳಿಕ ಕೆಲವು ದೇಶಗಳು ಸುಳ್ಳು ಮಾಧ್ಯಮ ಪ್ರಚಾರ ನಡೆಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಆಕ್ರಮಣ ನಡೆದಿದೆ’’ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸನ’ ವರದಿ ಮಾಡಿದೆ.