ಸ್ವೀಡನ್: ಗುಂಪಿನ ಮೇಲೆ ಟ್ರಕ್ ಹರಿದು 3 ಸಾವು
ಸ್ಟಾಕ್‌ಹೋಮ್ (ಸ್ವೀಡನ್), ಎ. 7: ಸ್ವೀಡನ್‌ನ ನಗರ ಸ್ಟಾಕ್‌ಹೋಮ್‌ನ ಡಿಪಾರ್ಟ್‌ಮೆಂಟ್ ಸ್ಟೋರೊಂದರ ಹೊರಗಿದ್ದ ಜನರ ಗುಂಪೊಂದರ ಮೇಲೆ ಶುಕ್ರವಾರ ಟ್ರಕ್ಕೊಂದು ಹರಿದು ಮೂವರು ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಗುಂಡು ಹಾರಾಟ ಸದ್ದು ಕೇಳಿಬಂದಿದೆ ಎಂದು ಸ್ವೀಡನ್ ಮಾಧ್ಯಮಗಳನ್ನು ಉಲ್ಲೇಖಿಸಿ ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ.
ಇದು ಭಯೋತ್ಪಾದಕ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ಸ್ವೀಡನ್ ಪ್ರಧಾನಿ ಸ್ಟೀಫನ್ ಲಾಫ್‌ವನ್ ಹೇಳಿದ್ದಾರೆ.ದಾಳಿಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಟೀಫನ್ ತಿಳಿಸಿದರು.
ಭಾರತೀಯ ರಾಯಭಾರ ಕಚೇರಿಯಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯರು ಮತ್ತು ಭಾರತೀಯರು ಸೇರಿದಂತೆ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿಯ ಮೂಲಗಳು ಹೇಳಿವೆ.
ಘಟನೆ ನಡೆದ ಸ್ಥಳವನ್ನು ಪೊಲೀಸರು ಮುಚ್ಚಿದ್ದಾರೆ. ಸ್ಥಳಕ್ಕೆ ಹೆಲಿಕಾಪ್ಟರ್‌ಗಳು, ಪೊಲೀಸ್ ಕಾರುಗಳು ಮತ್ತು ಆ್ಯಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ.