ಬೆಂಬೆಮ್ ದೇವಿ: ದಂತಕತೆಯಾದ ವನಿತಾ ಫುಟ್ಬಾಲ್ ತಾರೆ
2010ರಲ್ಲಿ ಭಾರತೀಯ ತಂಡದ ನಾಯಕಿಯಾಗಿ ನೇಮಕಗೊಂಡ ಬೆಂಬೆಮ್ 2010ರಲ್ಲಿ ಬಾಂಗ್ಲಾದಲ್ಲಿ ನಡೆದ 11ನೆ ದಕ್ಷಿಣ ಏಶ್ಯನ್ ಗೇಮ್ಸ್, 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಸ್ಯಾಫ್ ಮಹಿಳಾ ಚಾಂಪಿಯನ್ ಶಿಪ್ ಪಂದ್ಯಾಕೂಟ ಸೇರಿದಂತೆ ಐದು ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಭಾರತವನ್ನು ಜಯದೆಡೆಗೆ ಮುನ್ನಡೆಸಿದ್ದಾರೆ.
ಇಂಫಾಲಕ್ಕೆ ರಸ್ತೆಯ ಮೂಲಕ ಪ್ರಯಾಣಿಸಿದರೆ ಸಾಕು, ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು, ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಕ್ರೀಡಾಳುಗಳು ಎದುರಿಸಬಹುದಾದ ಅಸಂಖ್ಯಾತ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಅಥ್ಲೆಟಿಕ್ ಶಿಬಿರಗಳಲ್ಲಿ ಭಾಗವಹಿಸುವುದು ಕೂಡಾ ಅತ್ಯಂತ ಕಠಿಣವಾದ ಕೆಲಸವಾಗಿ ಬಿಡುತ್ತದೆ. ಯಾಕೆಂದರೆ ದುರ್ಗಮ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಶಿಬಿರಗಳಿಗೆ ಹಾಜರಾಗುವುದು ಅನಿಶ್ಚಿತತೆಯಿಂದ ಕೂಡಿರುತ್ತದೆ. ಒಂದು ವೇಳೆ ಮಹಿಳೆಯಾಗಿದ್ದರಂತೂ ಇನ್ನೂ ತುಂಬಾ ಕಷ್ಟ. ನಿರಂತರವಾದ ಆರ್ಥಿಕ ದಿಗ್ಬಂಧನಗಳು, ಮುಷ್ಕರಗಳು, ಉಗ್ರಗಾಮಿಗಳ ದಾಳಿಗಳು, ಬಂಡುಕೋರರ ಬೆದರಿಕೆ, ಕೌಟುಂಬಿಕ ಬದ್ಧತೆಗಳು ಹಾಗೂ ಕಳಪೆ ರಸ್ತೆ ಸಂಪರ್ಕ ಇವೆಲ್ಲವೂ ಮಣಿಪುರದ ಕ್ರೀಡಾಪಟುಗಳಿಗೆ ಮುಳುವಾಗಿ ಪರಿಣಮಿಸುತ್ತವೆ.
ಆದರೆ ಈ ಎಲ್ಲಾ ಸವಾಲುಗಳನ್ನು ಎದುರಿಸಿಯೂ ಮಣಿಪುರದ ಫುಟ್ಬಾಲ್ ಆಟಗಾರ್ತಿ ಒಯಿನಾಮ್ ಬೆಂಬೆಮ್ ದೇವಿ ತನ್ನ 20 ವರ್ಷಗಳ ಕ್ರೀಡಾಬದುಕಿನಲ್ಲಿ ಅತ್ಯಂತ ಅಭೂತಪೂರ್ವ ಸಾಧನೆ ಮೆರೆದಿದ್ದಾರೆ. ಭಾರತದ ಮಹಿಳಾ ಫುಟ್ಬಾಲ್ ರಂಗದ ಜೀವಂತ ದಂತಕತೆಯಾಗಿದ್ದಾರೆ. ಬೆಂಬೆಮ್‌ಗೆ 1989ರಲ್ಲಿ, ಅಂದರೆ ಹತ್ತು ವರ್ಷದವರಿದ್ದಾಗಲೇ ಫುಟ್ಬಾಲ್ ಮೋಹ ಆವರಿಸಿಕೊಂಡಿತ್ತು. ಆಗ ಆಕೆ ಹುಡುಗರೊಂದಿಗೆ ಫುಟ್ಬಾಲ್ ಆಡುತ್ತಾ, ಆಡುತ್ತಾ ಆ ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. 1991ರಲ್ಲಿ ಆಕೆ ಸಬ್‌ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್‌ಗಾಗಿ ಮಣಿಪುರದ ಅಂಡರ್-13 ತಂಡಕ್ಕೆ ಆಯ್ಕೆಯಾಗಿದ್ದರು.
ಆ ಟೂರ್ನಮೆಂಟ್‌ನಲ್ಲಿ ಬೆಂಬೆಮ್ ನಿವರ್ಹಣೆ ಗಮನಸೆಳೆಯದೆ ಇರಲಿಲ್ಲ. ಆನಂತರ ಆಕೆಗೆ ಮಣಿಪುರದ ಪ್ರತಿಷ್ಠಿತ ‘ಯಾವಾ ಸಿಂಗ್‌ಜಾಮೆಯಿ ಲೆಶಾಂಗ್ತೆಮ್ ಲೆಕಾಯ್ ಫುಟ್ಬಾಲ್ ಕ್ಲಬ್’ಗೆ ಸೇರ್ಪಡೆಗೊಳ್ಳುವ ಅವಕಾಶ ದೊರೆಯಿತು. ಬಳಿಕ 1993ರಲ್ಲಿ ಆಗಿನ ಮಹಿಳಾ ಪುಟ್ಬಾಲ್‌ರಂಗದ ದಂತಕತೆ ಎಲ್.ರಾಮೊನಿ ದೇವಿ ಮಾರ್ಗದರ್ಶನದಲ್ಲಿ ‘ಸನ್ ಫುಟ್ಬಾಲ್ ಕ್ಲಬ್’ ಸೇರಿದರು. ಆನಂತರ ರಾಷ್ಟ್ರಮಟ್ಟದಲ್ಲಿ ಮಹಿಳಾ ಫುಟ್ಬಾಲ್ ರಂಗದಲ್ಲಿ ತನ್ನ ಛಾಪು ಮೂಡಿಸಲು ಬೆಂಬೆಮ್‌ಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. 1993ರಲ್ಲಿ ಆಕೆ ತನ್ನ 13ರ ಹದೆಹರೆಯದಲ್ಲೇ ಮಣಿಪುರ ಮಹಿಳಾ ಫುಟ್ಬಾಲ್ ತಂಡದ ‘ಸ್ಟಾರ್ಟರ್’ ಆಟಗಾರ್ತಿಯಾಗಿದ್ದರು.
ಫುಟ್ಬಾಲ್ ಆಟಗಾರ್ತಿಯಾಗುವ ಬೆಂಬೆಮ್ ಅವರ ಹಂಬಲವನ್ನು ಆರಂಭದಲ್ಲಿ ಆಕೆಯ ತಂದೆ ಬಲವಾಗಿ ವಿರೋಧಿಸಿದ್ದರು. ಆದರೆ 1995ರಲ್ಲಿ ಭಾರತೀಯ ತಂಡಕ್ಕೆ ಬೆಂಬೆಮ್ ಆಯ್ಕೆಯಾದ ಬಳಿಕ ಅವರಿಗೆ ಮಗಳ ಬಗ್ಗೆ ಹೆಮ್ಮೆ ಮೂಡಿತು. ಆಕೆಯನ್ನವರು ಹುರಿದುಂಬಿಸಿದರು. 15 ವರ್ಷದವಳಿದ್ದಾಗ ಮಲೇಶ್ಯದ ಗುವಾಮ್‌ನಲ್ಲಿ ನಡೆದ ಏಶ್ಯನ್ ಮಹಿಳಾ ಚಾಂಪಿಯನ್‌ಶಿಪ್ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬೆಮ್ ಅಂತಾರಾಷ್ಟ್ರೀಯ ಫುಟ್ಬಾಲ್ ಕ್ಷೇತ್ರಕ್ಕೆ ಚೊಚ್ಚಲ ಪ್ರವೇಶ ಮಾಡಿದರು.
1996ರ ಏಶ್ಯನ್‌ಗೇಮ್ಸ್‌ನಲ್ಲಿ ಆಡುವ ಮೂಲಕ ಬೆಂಬೆಮ್ ರಾಷ್ಟ್ರೀಯ ಫುಟ್ಬಾಲ್ ರಂಗದಲ್ಲಿ ತನ್ನ ಆಗಮನವನ್ನು ಘೋಷಿಸಿದರು. ಚೀನಾದಲ್ಲಿ 1997ರ ಎಎಫ್‌ಸಿ ಕಪ್‌ಗೆ ಮುನ್ನ ಭಾರತೀಯ ತಂಡವನ್ನು ಒಂದು ತಿಂಗಳ ಅವಧಿಯ ತರಬೇತಿಗಾಗಿ ಜರ್ಮನಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ 22 ಮಂದಿ ಭಾರತೀಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ಜರ್ಮನಿಯ ಕೋಚ್‌ಗಳು ತರಬೇತಿ ನೀಡಿದರು ಹಾಗೂ ಅವರು ಜರ್ಮನಿಯ ತಂಡದೆದುರು ಆಡಿ ಸೈ ಎನಿಸಿಕೊಂಡರು.
ಈ ಶಿಬಿರವು ತನ್ನ ಫುಟ್ಬಾಲ್ ಬದುಕಿನ ಮೈಲುಗಲ್ಲೆಂದು ಬೆಂಬೆಮ್ ಹೇಳುತ್ತಾರೆ. 2010ರಲ್ಲಿ ಭಾರತೀಯ ತಂಡದ ನಾಯಕಿಯಾಗಿ ನೇಮಕಗೊಂಡ ಬೆಂಬೆಮ್ 2010ರಲ್ಲಿ ಬಾಂಗ್ಲಾದಲ್ಲಿ ನಡೆದ 11ನೆ ದಕ್ಷಿಣ ಏಶ್ಯನ್ ಗೇಮ್ಸ್, 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಸ್ಯಾಫ್ ಮಹಿಳಾ ಚಾಂಪಿಯನ್ ಶಿಪ್ ಪಂದ್ಯಾಕೂಟ ಸೇರಿದಂತೆ ಐದು ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಭಾರತವನ್ನು ಜಯದೆಡೆಗೆ ಮುನ್ನಡೆಸಿದ್ದಾರೆ.
2001ರಲ್ಲಿ ತನಗೆ ಎಐಎಫ್‌ಎಫ್ ವರ್ಷದ ಕ್ರೀಡಾಪಟು ಪ್ರಶಸ್ತಿ ಲಭಿಸಿದ್ದುದು ತನ್ನ ಬದುಕಿನ ಅತ್ಯುತ್ಕೃಷ್ಟ ಕ್ಷಣವೆಂದು ಬೆಂಬೆಮ್ ಭಾವು ಕರಾಗಿ ಸ್ಮರಿಸಿಕೊಳ್ಳುತ್ತಾರೆ. 2010ರಲ್ಲಿ ಬಾಂಗ್ಲಾದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯವೊಂದು ತನ್ನ ಅತ್ಯುನ್ನತವಾದ ಕ್ರೀಡಾ ಸನ್ನಿವೇಶವೆಂದು ಆಕೆ ಹೇಳುತ್ತಾರೆ. ಆ ಪಂದ್ಯದಲ್ಲಿ ತಾನು ಎಡಕಾಲಿನಿಂದ ಫ್ರಿ ಕಿಕ್ ಹೊಡೆದು ಗೋಲು ಬಾರಿಸಿದುದು ಅತ್ಯಂತ ರೋಚಕವಾಗಿತ್ತು ಎಂದು ಹೇಳುವ ಅವರು ತಾನು ಬಾರಿಸಿದ ಗೋಲನ್ನು ತಡೆಯಲು ಪುರುಷ ಕೀಪರ್‌ಗೂ ಸಾಧ್ಯವಾಗುತ್ತಿರಲಿಲ್ಲವೆಂದು ಆಕೆ ಹೇಳುತ್ತಾರೆ.
ಬೆಂಬೆಮ್‌ಗೆ ಕ್ರೀಡಾ ಜೀವನದ ಆರಂಭದಲ್ಲಿ ಅಪಾರವಾದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ತರುವಾಯ ಆಕೆ ಮಣಿಪುರ ಪೊಲೀಸ್ ಪಡೆಯಲ್ಲಿ ಉದ್ಯೋಗ ದೊರೆತ ಬಳಿಕ ಆಕೆಯ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಿತು. ಬೆಂಬೆಮ್, ಕ್ಲಬ್ ತಂಡಗಳ ಆಟಗಾರ್ತಿಯಾಗಿ ಮಾಲ್ದೀವ್ಸ್‌ನಲ್ಲಿ ಅಲ್ಪಸಮಯದವರೆಗೆ ಆಡಿದ್ದರು. 2014ರ ಜೂನ್‌ನಲ್ಲಿ ಮಾಲ್ಡೀವ್ಸ್‌ನ ಫುಟ್ಬಾಲ್ ಕ್ಲಬ್ ನ್ಯೂ ರೇಡಿಯಂಟ್, ಬೆಂಬೆಮ್ ಹಾಗೂ ಇನ್ನೋರ್ವ ಭಾರತೀಯ ಆಟಗಾರ್ತಿ ಲ್ಯಾಖೋ ಪಿ. ಅವರ ಜೊತೆಗೆ ತನ್ನ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿತು.
2015ರ ಡಿಸೆಂಬರ್ 31ರಂದು ಬೆಂಬೆಮ್ ತನ್ನ ಫುಟ್ಬಾಲ್ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದಾಗ್ಯೂ, ದಕ್ಷಿಣ ಏಶ್ಯ ಗೇಮ್ಸ್ ನಲ್ಲಿ ಕೊನೆಯ ಬಾರಿಗಾದರೂ ಭಾರತವನ್ನು ಪ್ರತಿನಿಧಿಸುವಂತೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮನವೊಲಿಸಿದ್ದರಿಂದ ಆಕೆ ತನ್ನ ನಿವೃತ್ತಿಯ ಯೋಚನೆಯನ್ನು ಮುಂದೂಡಿದರು. ಆ ಪಂದ್ಯಕೂಟವು ಬೆಂಬೆಂಮ್ ಪಾಲಿಗೆ ಆವಿಸ್ಮರಣೀಯವಾಗಿತ್ತು. ಸುಮಾರು ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೆಂಬೆಮ್, ಫುಟ್ಬಾಲ್ ಪಂದ್ಯದಲ್ಲಿ ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಚಿನ್ನ ಗೆದ್ದುಕೊಟ್ಟರು.
ಫೈನಲ್ ಪಂದ್ಯದಲ್ಲಿ ತನ್ನ ತಂಡವನ್ನು ಅಭಿನಂದಿಸಲು 20,000ಕ್ಕೂ ಅಧಿಕ ಅಭಿಮಾನಿಗಳು ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣಕ್ಕೆ ಧಾವಿಸಿದ ಘಟನೆಯು ತನ್ನ ಮನದಂಗಳದಲ್ಲಿ ಈಗಲೂ ಹಸಿರಾಗಿದೆಯೆಂದು ಬೆಂಬೆಮ್ ಹೇಳುತ್ತಾರೆ. ಅಂತಿಮ ಪಂದ್ಯದಲ್ಲಿ ಆಕೆಯ ತಂಡವು ನೇಪಾಳವನ್ನು 4-0 ಗೋಲುಗಳಿಂದ ಪರಾಭವಗೊಳಿಸಿತ್ತು.
ನಿವೃತ್ತಿಯ ಆನಂತರವೂ ಬೆಂಬೆಮ್‌ರ ಫುಟ್ಬಾಲ್ ನಂಟು ಕಡಿದು ಹೋಗಲಿಲ್ಲ. ಭಾರತೀಯ ಮಹಿಳಾ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆಡುವಂತೆ ಅವರನ್ನು ಮನವೊಲಿಸುವಲ್ಲಿ ಭಾರತೀಯ ಫುಟ್ಬಾಲ್ ಒಕ್ಕೂಟದ ಅಧಿಕಾರಿಗಳು ಯಶಸ್ವಿಯಾಗಿದ್ದರು. ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ ಕ್ಲಬ್‌ನ ಮ್ಯಾನೇಜರ್ ಆಗಿಯೂ ಆಕೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಭಾರತದಲ್ಲಿ ಈಗ ಅತ್ಯಂತ ಗುಣಮಟ್ಟದ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಹೊರಹೊಮ್ಮುತ್ತಿರುವ ಬಗ್ಗೆ ಬೆಂಬೆಮ್‌ಗೆ ತೃಪ್ತಿಯಿದೆ. ಭಾರತದ ಹೊಸ ತಲೆಮಾರಿನ ಫುಟ್ಬಾಲ್ ಆಟಗಾರ್ತಿಯರಲ್ಲಿ ಭಾರತೀಯ ತಂಡದ ನಾಯಕಿ ಬಾಲಾದೇವಿ ಅತ್ಯುತ್ತಮ ಆಟಗಾರ್ತಿಯೆಂದು ಬೆಂಬೆಮ್ ಭಾವಿಸಿದ್ದಾರೆ. ಶೀಘ್ರದಲ್ಲೇ ಫುಟ್ಬಾಲ್ ಶಾಲೆಯೊಂದನ್ನು ತೆರೆಯುವ ಯೋಚನೆ ಹೊಂದಿರುವ ಅವರು ಮಣಿಪುರದ ಯುವ ಪ್ರತಿಭೆಗಳನ್ನು ಪೋಷಿಸುವ ಕನಸು ಕಾಣುತ್ತಿದ್ದಾರೆ.