ಅಮೆರಿಕದ ವಾಯುದಾಳಿ ಬಗ್ಗೆ ಸಿರಿಯಾಗೆ ಮೊದಲೇ ಮಾಹಿತಿಯಿತ್ತೇ ?
ಸಿರಿಯಾ, ಎ.8: ಸಿರಿಯಾದ ಶಯ್ರತ್ ವಾಯುನೆಲೆಯ ಮೇಲೆ ಗುರುವಾರ ರಾತ್ರಿ ಅಮೆರಿಕ ನಡೆಸಿದ ದಾಳಿಯ ಬಗ್ಗೆ ಸಿರಿಯಾ ಮಿಲಿಟರಿ ಅಧಿಕಾರಿಗಳಿಗೆ ಮೊದಲೇ ಮಾಹಿತಿಯಿತ್ತು ಎಂದು ಅಂದಾಜಿಸಲಾಗಿದೆ. ಇದರಿಂದಾಗಿಯೇ ಅವರು ಅಲ್ಲಿದ್ದ ಸಿಬ್ಬಂದಿ ಮತ್ತು ಉಪಕರಣಗಳನ್ನು ವಾಯು ದಾಳಿಯ ಮೊದಲೇ ಅಲ್ಲಿಂದ ಸ್ಥಳಾಂತರಿಸಿದ್ದರು ಎಂದು ಹೇಳಲಾಗಿದೆ.
ಹೋಮ್ಸ್ ಸಮೀಪದ ವಾಯು ನೆಲೆಯ ಮೇಲೆ ಅಮೆರಿಕ ವಾಯು ದಾಳಿ ಸಂದರ್ಭ ಹಲವಾರು ತೊಮಹಾಕ್ ಕ್ಷಿಪಣಿಗಳನ್ನು ಗುರಿಯಾಗಿಸಲಾಗಿತ್ತು ಹಾಗೂ ಇದರಿಂದ ರನ್ ವೇಗಳು, ಗೋಪುರಗಳು, ಟ್ರಾಫಿಕ್ ನಿಯಂತ್ರಣ ಕಟ್ಟಡಗಳು ಹಾನಿಗೊಂಡಿವೆ. ಇದೇ ವಾಯುನೆಲೆಯಿಂದ ಹಾರಿದ ವಿಮಾನವೊಂದು 85 ಜನರನ್ನು ಬಲಿ ಪಡೆದ ಇಡಿಬ್ ಪ್ರಾಂತದ ಮೇಲೆ ಮಂಗಳವಾರ ರಾಸಾಯನಿಕ ದಾಳಿ ನಡೆಸಿತ್ತು ಎಂದು ಊಹಿಸಲಾಗಿದೆ.
ತರುವಾಯ ಗುರುವಾರ ರಾತ್ರಿ ಸಿರಿಯಾದ ವಾಯು ನೆಲೆಯ ಮೇಲೆ ಅಮೆರಿಕ ದಾಳಿ ನಡೆದ ನಂತರ ಶುಕ್ರವಾರ ಅಲ್ಲಿನ ಅಂಗಡಿಗಳು ಮುಚ್ಚಿದ್ದರೂ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತಿತ್ತಲ್ಲದೆ ವಾಯುನೆಲೆಯಿಂದ ಹೊರ ಹೋಗಿದ್ದ ಹಲವಾರು ಮಂದಿ ಮತ್ತೆ ಅಲ್ಲಿಗೆ ವಾಪಸ್ಸಾಗಿದ್ದಾರೆ. ಈ ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿ ಹಲವಾರು ಇತರರು ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಹೆಚ್ಚಿನ ಎಲ್ಲಾ ರನ್-ವೇಗಳು, ಸುಮಾರು 40 ಬಂಕರುಗಳು ಹಾಗೂ ಅಲ್ಲಿ ನಿಲ್ಲಿಸಲಾಗಿದ್ದ ಕೆಲ ಉಪಯೋಗಿಸಲ್ಪಡದೇ ಇದ್ದ ವಿಮಾನಗಳೂ ಹಾನಿಗೊಂಡಿವೆಯೆನ್ನಲಾಗಿದೆ.
ಸ್ಥಳೀಯರ ಪ್ರಕಾರ 2016ರ ಆರಂಭದಲ್ಲಿ ಈ ವಾಯುನೆಲೆಯನ್ನು ರಷ್ಯನ್ ಮಿಲಿಟರಿ ಉಪಯೋಗಿಸುತ್ತಿದ್ದರೂ ಈಗ ಹೆಚ್ಚಾಗಿ ಸಿರಿಯಾ ಹಾಗೂ ಇರಾನ್ ಮಿಲಿಟರಿ ಅಧಿಕಾರಿಗಳ ಹಿಡಿತದಲ್ಲಿ ಅದು ಇದೆ.