ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರು ಮಾತ್ರ ಭಾರತೀಯರೇ?

Update: 2017-04-08 13:57 GMT

ಹೊಸದಿಲ್ಲಿ,ಎ.8: ದಕ್ಷಿಣ ಭಾರತೀಯರ ವಿರುದ್ಧ ಬಿಜೆಪಿ ನಾಯಕ ತರುಣ್ ವಿಜಯ್ ಅವರ ಜನಾಂಗೀಯ ಹೇಳಿಕೆಯ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ರಾಜಕಾರಣಿಗಳು ಪಕ್ಷಭೇದ ಮರೆತು ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರು ಮಾತ್ರ ಈ ದೇಶದಲ್ಲಿ ಭಾರತೀಯರೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ವಿಜಯ್‌ರನ್ನು ಪ್ರಶ್ನಿಸಿದ್ದಾರೆ.

ನಾವು ಕಪ್ಪು ಜನರೊಂದಿಗೆ ಬಾಳುತ್ತಿದ್ದೇವೆ ಎಂದು ತರುಣ್ ವಿಜಯ್ ಹೇಳಿದ್ದಾರೆ. ಇಲ್ಲಿ ‘ನಾವು’ ಎಂದರೆ ಯಾರು ಎಂದು ನಾನು ಅವರಿಗೆ ಕೇಳುತ್ತಿದ್ದೇನೆ. ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರು ಮಾತ್ರ ಭಾರತೀಯರು ಎಂದು ಅವರು ಹೇಳುತ್ತಿದ್ದಾರೆಯೇ ಎಂದು ತಮಿಳುನಾಡು ಮೂಲದ ಚಿದಂಬರಂ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಗ್ರೇಟರ್ ನೊಯ್ಡದಲ್ಲಿ ನೈಜೀರಿಯಾ ವಿದ್ಯಾರ್ಥಿಗಳ ಮೇಲಿನ ಇತ್ತೀಚಿನ ಹಲ್ಲೆಗಳ ಕುರಿತು ಚರ್ಚಿಸಲು ಅಲ್ ಜಝೀರಾ ಸುದ್ದಿವಾಹಿನಿಯ ‘ದಿ ಸ್ಟ್ರೀಮ್’ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ತರುಣ್ ವಿಜಯ್ ಭಾರತ ಮತ್ತು ಅದರ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ,‘‘ನಾವು ಜನಾಂಗೀಯ ದ್ವೇಷಿಗಳಾಗಿದ್ದಲ್ಲಿ ನಮ್ಮ ಸುತ್ತಲೂ ದಕ್ಷಿಣ ಭಾರತದ ಜನರನ್ನೇಕೆ ಹೊಂದಿರುತ್ತಿದ್ದೆವು? ನಾವು ಅವರೊಂದಿಗೇಕೆ ಬಾಳುತ್ತಿದ್ದೆವು? ನಮ್ಮ ಸುತ್ತಲೂ ಕಪ್ಪುಜನರನ್ನು ನಾವು ಹೊಂದಿದ್ದೇವೆ ’’ ಎಂದು ಹೇಳಿದ್ದರು.

ವಿಜಯ್ ಅವರ ಹೇಳಿಕೆಯು ‘ತಾವೇ ಶ್ರೇಷ್ಠರು ’ಎಂಬ ಬಿಜೆಪಿಯ ಮನೋಸ್ಥಿತಿಗೆ ಉದಾಹರಣೆಯಾಗಿದೆ ಎಂದು ಹೇಳಿರುವ ಇನ್ನೋರ್ವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಇಂತಹ ಹೇಳಿಕೆಗಳನ್ನು ತಾನು ಖಂಡಿಸುತ್ತೇನೆ ಎಂದಿದ್ದಾರೆ.

ಎಲ್ಲ ದಕ್ಷಿಣ ಭಾರತೀಯರೂ ಕಪ್ಪು ಮೈಬಣ್ಣ ಹೊಂದಿಲ್ಲ. ಹೀಗಾಗಿ ವಿಜಯ್ ಹೇಳಿಕೆಯೇ ಹಾಸ್ಯಸ್ಪದವಾಗಿದೆ ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಲೇವಡಿಯಾಡಿದ್ದರೆ ತಮಿಳುನಾಡಿನ ಇನ್ನೋರ್ವ ರಾಜಕಾರಣಿ, ಸಿಪಿಐನ ಡಿ.ರಾಜಾ ಅವರು ವಿಜಯ್ ಹೇಳಿಕೆಯು ಆರೆಸ್ಸೆಸ್‌ನ ಫ್ಯಾಸಿಸ್ಟ್ ಸಿದ್ಧಾಂತವನ್ನು ಬಯಲುಗೊಳಿಸಿದೆ. ಈ ಹೇಳಿಕೆಯನ್ನು ಬಿಜೆಪಿಯು ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತನ್ನ ವಿರುದ್ಧದ ಕಿಡಿನುಡಿಗಳಿಂದ ಹೈರಾಣಾಗಿರುವ ವಿಜಯ್ ತನ್ನ ಹೇಳಿಕೆಗಾಗಿ ಟ್ವಿಟರ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ. ಕಪ್ಪುವರ್ಣದ ಶ್ರೀಕೃಷ್ಣನನ್ನು ಆರಾಧಿಸುವ ಭಾರತದ ಸಂಯುಕ್ತ ಸಂಸ್ಕೃತಿಯನ್ನು ಪ್ರಮುಖವಾಗಿ ಬಿಂಬಿಸುವುದು ತನ್ನ ಉದ್ದೇಶವಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News