×
Ad

‘ಭಯೋತ್ಪಾದಕರು’ ಅಮೆರಿಕವನ್ನು ಅಭಿನಂದಿಸುತ್ತಿದ್ದಾರೆ : ಇರಾನ್ ಅಧ್ಯಕ್ಷ ಹಸನ್ ರೂಹಾನಿ

Update: 2017-04-08 20:18 IST

ಟೆಹರಾನ್, ಎ. 8: ಸಿರಿಯದ ವಾಯು ನೆಲೆಯೊಂದರ ಮೇಲೆ ಅಮೆರಿಕ ನಡೆಸಿರುವ ದಾಳಿಗಾಗಿ ‘ಭಯೋತ್ಪಾದಕರು’ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಅಭಿನಂದಿಸುತ್ತಿದ್ದಾರೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಹೇಳಿದ್ದಾರೆ.

ಆದಾಗ್ಯೂ, ವಾಯುವ್ಯ ಸಿರಿಯದ ಪಟ್ಟಣವೊಂದರ ಮೇಲೆ ನಡೆದ ಶಂಕಿತ ರಾಸಾಯನಿಕ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂಬ ಕರೆಗಳಿಗೆ ಅವರು ಬೆಂಬಲ ನೀಡಿದರು.

ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರ ತನ್ನದೇ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದೆ ಎಂಬುದಾಗಿ ಅಮೆರಿಕ ಆರೋಪಿಸಿದೆ.

‘‘ಈಗ ಅಮೆರಿಕದಲ್ಲಿ ಅಧಿಕಾರದಲ್ಲಿರುವ ಈ ವ್ಯಕ್ತಿ ತಾನು ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅಮೆರಿಕ ನಡೆಸಿದ ಈ ದಾಳಿಯ ಸಂಭ್ರಮವನ್ನು ಸಿರಿಯದ ಎಲ್ಲ ಭಯೋತ್ಪಾದಕರು ಆಚರಿಸುತ್ತಿದ್ದಾರೆ’’ ಎಂದು ಸರಕಾರಿ ಟೆಲಿವಿಶನ್‌ನಲ್ಲಿ ಪ್ರಸಾರವಾದ ಭಾಷಣದಲ್ಲಿ ರೂಹಾನಿ ಹೇಳಿದರು.

‘‘ಭಯೋತ್ಪಾದಕರೊಂದಿಗೆ ಯುದ್ಧದಲ್ಲಿ ತೊಡಗಿದ್ದ ಸಿರಿಯ ಸೇನೆಯ ಮೇಲೆ ನೀವು ಯಾಕೆ ದಾಳಿ ನಡೆಸಿದಿರಿ? ಯಾವ ಕಾನೂನು ಅಥವಾ ಅಧಿಕಾರದಡಿ ನೀವು ನಿಮ್ಮ ಕ್ಷಿಪಣಿಗಳನ್ನು ಈ ಸ್ವತಂತ್ರ ದೇಶದ ಮೇಲೆ ಹಾರಿಸಿದಿರಿ?’’ ಎಂದು ಅವರು ಪ್ರಶ್ನಿಸಿದರು.

ಇರಾನ್ ಮತ್ತು ರಶ್ಯ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್‌ರ ನಿಕಟ ಮಿತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News