ಮ್ಯಾನ್ಮಾರ್: ಮದುವೆ ಅತಿಥಿಗಳನ್ನು ಒಯ್ಯುತ್ತಿದ್ದ ದೋಣಿ ಮುಳುಗಿ 20 ಸಾವು

Update: 2017-04-08 14:50 GMT

ಯಾಂಗನ್ (ಮ್ಯಾನ್ಮಾರ್), ಎ. 8: ಪಶ್ಚಿಮ ಮ್ಯಾನ್ಮಾರ್‌ನ ನದಿಯೊಂದರಲ್ಲಿ ಮದುವೆ ಅತಿಥಿಗಳನ್ನು ಒಯ್ಯುತ್ತಿದ್ದ ದೋಣಿಯೊಂದು ಬಾರ್ಜ್‌ಗೆ ಢಿಕ್ಕಿಯಾದ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಯಾಂಗನ್‌ನ ಪಶ್ಚಿಮಕ್ಕಿರುವ ಬಂದರು ನಗರ ಪತೀನ್ ಸಮೀಪ ನದಿಯೊಂದರಲ್ಲಿ ಶುಕ್ರವಾರ ಸಂಜೆ ದೋಣಿಯೊಂದು ಮುಳುಗಿತು.

ಮದುವೆಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸುಮಾರು 60 ಮಂದಿಯನ್ನು ದೋಣಿ ಒಯ್ಯುತ್ತಿತ್ತು ಎಂದು ನಂಬಲಾಗಿದೆ.ಮೃತಪಟ್ಟವರಲ್ಲಿ 16 ಮಹಿಳೆಯರು ಮತ್ತು ನಾಲ್ವರು ಪುರುಷರು ಎಂದು ಅಧಿಕಾರಿಗಳು ತಿಳಿಸಿದರು.

‘‘ಪತೀನ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ ಬಳಿಕ ಅವರು ನದಿಯನ್ನು ದಾಟುತ್ತಿದ್ದರು. ಹೆಚ್ಚಿನವರು ಒಂದೇ ಗ್ರಾಮದ ಸಂಬಂದಿಕರು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ನದಿಯ ಮಧ್ಯಭಾಗದಲ್ಲಿ ದೋಣಿ ಮತ್ತು ಬಾರ್ಜ್‌ಗಳು ಢಿಕ್ಕಿಯಾದ ಬಳಿಕ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News