×
Ad

ಥಾಣೆ ಕಾಲ್‌ಸೆಂಟರ್ ಹಗರಣದ ರೂವಾರಿ ಸಾಗರ್ ಠಕ್ಕರ್ ಬಂಧನ

Update: 2017-04-08 21:56 IST

 ಮುಂಬೈ, ಎ.8: ಸಾವಿರಾರು ಅಮೆರಿಕನ್ನರ ಖಾತೆಯಿಂದ ಸುಮಾರು 300 ಮಿಲಿಯನ್ ಡಾಲರ್‌ನಷ್ಟು ಹಣ ಲಪಟಾಯಿಸಿದ ಥಾಣೆ ಕಾಲ್ ಸೆಂಟರ್ ಹಗರಣದ ರೂವಾರಿ ಸಾಗರ್ ಠಕ್ಕರ್ ಅಲಿಯಾಸ್ ಶ್ಯಾಗಿಯನ್ನು ಕೊನೆಗೂ ಬಂಧಿಸುವಲ್ಲಿ ಥಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಈ ಹಗರಣ ಬೆಳಕಿಗೆ ಬಂದ ಬಳಿಕ ಸಾಗರ್ ತಲೆಮರೆಸಿಕೊಂಡಿದ್ದ. ದುಬೈಯಲ್ಲಿ ನೆಲೆಸಿದ್ದ ಈತನನ್ನು ಗಡೀಪಾರು ಮಾಡಲಾಗಿದ್ದು ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

  ಥಾಣೆಯಲ್ಲಿರುವ ಸುಮಾರು ಆರು ಕಾಲ್‌ಸೆಂಟರ್‌ಗಳಲ್ಲಿ ಕನಿಷ್ಠ 15000 ಅಮೆರಿಕನ್ ಮೂಲದ ವ್ಯಕ್ತಿಗಳ ಖಾತೆಯಿಂದ ಹಣ ಲಪಟಾಯಿಸುವ ಈ ದಂಧೆ 2013ರಿಂದಲೇ ನಡೆಯುತ್ತಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪೊಲೀಸರು ಥಾಣೆಯ ಮಿತ್ರಾ ರೋಡ್‌ನಲ್ಲಿರುವ ಕಾಲ್‌ಸೆಂಟರ್ ಮೇಲೆ ದಾಳಿ ನಡೆಸಿದಾಗ ಹಗರಣ ಬೆಳಕಿಗೆ ಬಂದಿತ್ತು. 70ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಇವರು ಕಾಲ್‌ಸೆಂಟರ್‌ಗಳ ನಿರ್ದೇಶಕರು ಹಾಗೂ ಇತರ ಪ್ರಮುಖ ವ್ಯಕ್ತಿಗಳಾಗಿದ್ದರು. ಕಾಲ್‌ಸೆಂಟರ್‌ನ 700 ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಸಾಗರ್ ಹೆಸರನ್ನು ತಿಳಿಸಿದ್ದರು. ಆದರೆ ಅದಾಗಲೇ ಆತ ಭಾರತದಿಂದ ಪರಾರಿಯಾಗಿದ್ದ.

ಅತ್ಯಂತ ಅದ್ದೂರಿಯಾಗಿ ಜೀವನ ಸಾಗಿಸುತ್ತಿದ್ದ ಸಾಗರ್‌ನ ಬೆಂಗಾವಲಿಗೆ ಸದಾ 12ಕ್ಕೂ ಹೆಚ್ಚು ಬಾಡಿಗಾರ್ಡ್‌ಗಳಿದ್ದರು. ಮುಂಬೈಯಲ್ಲಿ ನಡೆಯುತ್ತಿದ್ದ ದುಬಾರಿ ತಡರಾತ್ರಿ ಪಾರ್ಟಿಗಳಿಗೆ ಈತ ಸದಾ ಹಾಜರಾಗುತ್ತಿದ್ದ. ಅಲ್ಲದೆ ಅತ್ಯಂತ ವೈಭವೋಪೇತ ಕಾರುಗಳನ್ನು ಕೊಳ್ಳುವುದು ಈತನ ಹವ್ಯಾಸವಾಗಿತ್ತು.

  23ರ ಹರೆಯದ ಸಾಗರ್, ತನ್ನ ಗೆಳತಿಯ ಹುಟ್ಟುಹಬ್ಬದ ಸಂದರ್ಭ ಆಕೆಗೆ 2.5 ಕೋಟಿ ರೂ. ಬೆಲೆಬಾಳುವ ಆಡಿ ಆರ್8 ಕಾರನ್ನು ಉಡುಗೊರೆಯಾಗಿ ನೀಡಿದ್ದ. ಈ ಕಾರನ್ನು ಭಾರತದ ಕ್ರಿಕೆಟ್ ಆಟಗಾರನೋರ್ವ ಈತನಿಗೆ 70 ಲಕ್ಷಕ್ಕೆ ಮಾರಿದ್ದರು ಎಂದು ತಿಳಿಸಿರುವ ಪೊಲೀಸರು, ಈ ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News