ಕುಂಚದಲ್ಲಿ ಮೂಡಿತು ನೇತ್ರಾವತಿ ರೋದನ!: ಕದ್ರಿ ಪಾರ್ಕ್‌ನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Update: 2017-04-08 16:44 GMT

ಮಂಗಳೂರು, ಎ.8: "ಇಲ್ಲೂ ಬರದ ಘೋಷಣೆ, ಈಗ ಸತ್ಯ ನಮ್ಮ ಅಂಗಳದಲ್ಲಿದೆ", "ಮಗು ನೀರು ಕೇಳು", "ನಮ್ಮವರಿಂದಲೇ ನಮ್ಮ ನದಿಮೂಲ ನಾಶ" ಇದು ಯುವ ಕಲಾವಿದೆ ತಮ್ಮ ಕಲಾಕುಂಚದ ಮೂಲಕ ದಕ್ಷಿಣ ಕನ್ನಡ ನೀರಿನ ಸಮಸ್ಯೆಯನ್ನು, ಮುಂದೆ ಎದುರಾಗಲಿರುವ ಆತಂಕವನ್ನು ತೆರಿದಿಟ್ಟ ಬಗೆ.

ನಗರದ ಕದ್ರಿ ಪಾರ್ಕ್‌ನಲ್ಲಿ ಇಂದಿನಿಂದ ಆರಂಭಗೊಂಡ ಸ್ವರೂಪ ಅಧ್ಯಯನ ಕೇಂದ್ರದ ಕಲಾವಿದೆ ಮನಸ್ವಿ ಅವರ "ಜಲಾಂತರಂಗ- ನೀರಿಗಾಗಿ ಕಣ್ಣೀರು" ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಜಿಲ್ಲೆಯ ಜೀವನದಿಯಾದ ನೇತ್ರಾವತಿ ಎದುರಿಸುತ್ತಿರುವ ಆತಂಕವನ್ನು ತಮ್ಮ ಚಿತ್ರಗಳ ಮೂಲಕ ತೆರೆಡಿರುವ ಪ್ರಯತ್ನ ಮಾಡಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮನಸ್ವಿಯವರು ಚಿತ್ರಿಸಿರುವ 12*6 ಅಡಿ ಗಾತ್ರದ ಕ್ಯಾನ್ವಾಸ್‌ನಲ್ಲಿ ಬೃಹತ್ ಗಾತ್ರದ ನಾಲ್ಕು ಚಿತ್ರಗಳು ಹಾಗೂ 3*3 ಅಡಿ ಗಾತ್ರದ 8 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಸ್ವರೂಪ ಅಧ್ಯಯನ ಕೇಂದ್ರದ ಮಾದರಿ ವಿದ್ಯಾರ್ಥಿನಿಯಾಗಿರುವ ಮನಸ್ವಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕಲಾ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿನಿ.

ಆಳ್ವಾಸ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಎತ್ತಿನಹೊಳೆ, ಪಶ್ಚಿಮ ಘಟ್ಟ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಇದು ದೇಶದ ಸಂಪತ್ತು. ಹೋರಾಟಗಾರರ ಜತೆ ನಾವು ಧ್ವನಿಯಾಗುವ ಅವಶ್ಯಕತೆ ಇದೆ ಎಂದರು. 

ಸಾಹಿತಿ ಗುರುರಾಜ ಮಾರ್ಪಳ್ಳಿ ಮಾತನಾಡಿ, ಚುನಾವಣೆಗೆ ಮೊದಲು ದೇವತೆಗಳು, ಬಳಿಕ ರಾಕ್ಷಸರಾಗುವ ಜನನಾಯಕರಿಗೆ ಪರಿಸರದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಜನಪ್ರತಿನಿಧಿಗಳನ್ನು ಓಲೈಸದೆ ಅವರ ಬಗ್ಗೆ ನಿರ್ಲಕ್ಷ ಧೋರಣೆ ತಾಳಬೇಕು ಎಂದರು.

ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ, ಪ್ರಕೃತಿ ನೀಡಿದ ಸಂಪತ್ತನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆ. ಇದಕ್ಕಾಗಿ ಸಾಹಿತಿಗಳು, ಕಲಾವಿದರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.

ಸಹ್ಯಾದ್ರಿ ಸಂಚಯನದ ಸಂಚಾಲಕ ದಿನೇಶ್ ಹೊಳ್ಳ ಮಾತನಾಡಿ, ದ.ಕ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದಾಗ ಜಿಲ್ಲೆಯ ಜನ ಆಂದೋಲನವನ್ನೇ ಮಾಡಬೇಕಿತ್ತು. ಆದರೆ ಜನತೆ ವೌನವಾಗಿದ್ದಾರೆ. ಎತ್ತಿನ ಹೊಳೆ ಯೋಜನೆ ಆಗದೆಯೇ ಜಿಲ್ಲೆ ಬರಪೀಡಿತವಾಗಿದೆ. ಆದರೆ ಮೂರು ವರ್ಷಗಳ ಬಳಿಕ ಜಿಲ್ಲೆಯ ಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ನೇತ್ರಾವತಿಯ 9 ಉಪನದಿಗಳ ಸಂರಕ್ಷಣೆಯಾಗದಿದ್ದರೆ ನೇತ್ರಾವತಿ ನದಿ ಸಂರಕ್ಷಣೆ ಎಂಬುದು ಕಲ್ಪನೆ ಮಾತ್ರ ಎಂದರು.

ಈ ಸಂದರ್ಭ ಕಲಾವಿದ ಗಣೇಶ ಸೋಮಯಾಜಿ, ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್, ನಿಸರ್ಗ ಫೌಂಡೇಶನ್‌ನ ನಿರ್ದೇಶಕ ಮಂಜುನಾಥ ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News