ಯಾವುದೇ ನಿರ್ಧಾರಕ್ಕೆ ಡಿಸಿ ಸ್ವತಂತ್ರರು: ಸಚಿವ ಪ್ರಮೋದ್ ಮಧ್ವರಾಜ್

Update: 2017-04-08 18:40 GMT

ಉಡುಪಿ, ಎ.8: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪೂರ್ಣ ಸ್ವಾತ್ರಂತ್ಯ ನೀಡಿದ್ದೆ. ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಎ.2ರ ರಾತ್ರಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್ ಹಾಗೂ ಕಂಡ್ಲೂರು ವಿಎ ಬಸ್ರೂರು ಸಮೀಪದ ಕಂಡ್ಲೂರಿನಲ್ಲಿ ಮರಳು ಮಾಫಿಯಾದಿಂದ ಹಲ್ಲೆಗೆ ತುತ್ತಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ತನ್ನ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಜಿಲ್ಲೆಯ ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ತಾನೆಂದೂ ಹಸ್ತಕ್ಷೇಪ ನಡೆಸಿಲ್ಲ ಎಂದವರು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅದೇ ದಿನ ರಾತ್ರಿ ಘಟನೆಯ ಕುರಿತಂತೆ ನನಗೆ ಮಾಹಿತಿ ನೀಡಿದ್ದಾರೆ. ಕರ್ತವ್ಯ ನಿರತರಾಗಿದ್ದ ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮಿಷನರ್ ಮೇಲೆ ನಡೆದ ಹಲ್ಲೆ ಪ್ರಯತ್ನವನ್ನು ನಾನು ಆಗಲೇ ಖಂಡಿಸಿದ್ದೇನೆ ಎಂದರು.

ಆ ಬಳಿಕ ನಾನು ನಿರಂತರವಾಗಿ ಡಿಸಿ, ಎಸಿ, ಎಸ್ಪಿ ಹಾಗೂ ಇತರ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಸಲಹೆ-ಸೂಚನೆಗಳನ್ನು ನೀಡುತ್ತಿದ್ದೆ. ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿದ್ದ ನಾನು ದೈಹಿಕವಾಗಿ ಅಲ್ಲಿದ್ದರೂ, ಮಾನಸಿಕವಾಗಿ ಉಡುಪಿಯಲ್ಲೇ ಇದ್ದೆ ಎಂದು ವಿಷಯಕ್ಕೆ ಸಂಬಂಧಿಸಿದಂತೆ ತನ್ನನ್ನು ಟೀಕಿಸಿದವರಿಗೆ ಉತ್ತರ ನೀಡಿದರು.

ಕೆಲ ಮರಳು ಕಾರ್ಮಿಕರ ಬಂಧನ ಮಾತ್ರ ನಡೆದಿದ್ದು, ಅದರ ಸೂತ್ರಧಾರನ ಪತ್ತೆ, ಬಂಧನ ಏಕಾಗಿಲ್ಲ ಎಂದು ಕೇಳಿದಾಗ, ಈ ಬಗ್ಗೆ ಎಸ್ಪಿ ಬಳಿ ಮಾತನಾಡುತ್ತೇನೆ ಎಂದರು. ಮರಳು ಮಾಫಿಯಾ ತನ್ನ ನೇತೃತ್ವದಲ್ಲೇ ನಡೆಯುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಅವರು ಸ್ಪಷ್ಟವಾಗಿ ತಳ್ಳಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News