ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹೆಸರು ನೊಂದಾಯಿಸಿರುವ 100ಕ್ಕೂ ಹೆಚ್ಚು ಅಭ್ಯರ್ಥಿಗಳ ವಯಸ್ಸೆಷ್ಟು ಗೊತ್ತೇ?
ಮುಂಬೈ, ಎ.9: ವೈದ್ಯ ಪದವಿ ಆಕಾಂಕ್ಷಿಗಳಿಗೆ ವಯಸ್ಸು ಎನ್ನುವುದು ಕೇವಲ ಸಂಖ್ಯೆಯಷ್ಟೇ. ಕಳೆದ ವರ್ಷ ಎಂಬಿಬಿಎಸ್ ಹಾಗೂ ಬಿಡಿಎಸ್ ಕಾಲೇಜುಗಳ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆಯಲ್ಲಿ 61-70 ವರ್ಷ ವಯಸ್ಸಿನ ಇಬ್ಬರು ಹೆಸರು ನೋಂದಾಯಿಸಿಕೊಂಡಿದ್ದರು. 41-60 ವಯೋಮಾನದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಬರೆಯಲು ಮುಂದಾಗಿದ್ದರು.
ಎಂಬಿಬಿಎಸ್ ಅತ್ಯಂತ ಕಠಿಣ ಹಾಗೂ ಅತ್ಯಧಿಕ ಅಧ್ಯಯನ ಬಯಸುವ ಕೋರ್ಸ್ ಎನ್ನುವ ಕಾರಣಕ್ಕೆ ಅಲ್ಲಿಂದ ಪಲಾಯನ ಮಾಡಲು ಅವರು ಬಯಸಿಲ್ಲ. ಬಹುತೇಕ ಮಂದಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲಾರರು ಎಂಬ ಅಂಜಿಕೆ ಕೂಡಾ ಅವರನ್ನು ಇದರಿಂದ ವಿಮುಖಗೊಳಿಸಿಲ್ಲ. ಈ ರಾಷ್ಟ್ರೀಯ ಪರೀಕ್ಷೆಗೆ ಇದ್ದ ಗರಿಷ್ಠ ವಯೋಮಿತಿಯನ್ನು ಸುಪ್ರೀಂಕೋರ್ಟ್ ಕಿತ್ತುಹಾಕಿದ ಬಳಿಕ, ಕೆಲವೇ ತಿಂಗಳಲ್ಲಿ ನಡೆಯಲಿರುವ ಈ ಸವಾಲಿನ ಪರೀಕ್ಷೆಗೆ ಹಲವು ಮಂದಿ ಸಜ್ಜಾಗುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಹಾಕಿದ್ದ ದಾವೆಯ ಪ್ರಕಾರ, 20 ಸಾವಿರಕ್ಕಿಂತಲೂ ಅಧಿಕ ಮಂದಿ 25 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿದ್ದಾರೆ.
ಅಮೆರಿಕದ ಹೂಸ್ಟನ್ ವಿಶ್ವವಿದ್ಯಾನಿಲಯದಿಂದ ಎಂಎಸ್ ಪದವಿ ಪಡೆದಿರುವ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಈ ಬಾರಿ ನೀಟ್ ಬರೆಯಲು ಬಯಸಿದ್ದಾರೆ. "ತೀರಾ ತಡವಾಗಿ ನನಗೆ ವೈದ್ಯನಾಗುವ ಅಭಿಲಾಷೆ ಮೂಡಿದೆ. ನಾನು ಆಯ್ಕೆಯಾಗುತ್ತೇನೆ ಎಂಬ ಖಾತ್ರಿ ಇಲ್ಲ. ಆದರೆ ಶಕ್ತಿಮೀರಿ ಶ್ರಮ ಹಾಕುತ್ತೇನೆ. ಎರಡು ತಿಂಗಳು ನ್ಯಾಯಾಲಯ ಹೋರಾಟದಲ್ಲಿ ನಮ್ಮ ಸಮಯ ವ್ಯರ್ಥವಾಯಿತು" ಎಂದು ಮಧ್ಯಪ್ರದೇಶದಲ್ಲಿ ವೈದ್ಯಕೀಯ ಸೀಟು ಪಡೆಯುವ ಕನಸು ಕಾಣುತ್ತಿರುವ 31 ವರ್ಷದ ಇವರು ಹೇಳುತ್ತಾರೆ.
ತಮ್ಮ ಪ್ರಸ್ತುತ ಉದ್ಯೋಗದ ಆಯ್ಕೆಯಿಂದ ತೃಪ್ತಿ ಇಲ್ಲದ 30 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಲವು ಮಂದಿ ವೈದ್ಯಕೀಯ ಪದವಿಗೆ ಬರುವ ಆಸಕ್ತಿ ತೋರಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ವಿವಿ ರಿಜಿಸ್ಟ್ರಾರ್ ಕೆ.ಡಿ.ಚವ್ಹಾಣ್ ಹೇಳುತ್ತಾರೆ. 34 ವರ್ಷದ ನನ್ನ ಸ್ನೇಹಿತನೊಬ್ಬ ನೀಟ್‌ಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ವಿವರಿಸುತ್ತಾರೆ.