ಕೊರಿಯಾ ಪರ್ಯಾಯ ದ್ವೀಪದತ್ತ ಅಮೆರಿಕದ ನೌಕಾಪಡೆಯ ದಾಳಿ ತಂಡ

Update: 2017-04-09 15:02 GMT

ವಾಷಿಂಗ್ಟನ್, ಎ.9: ಉತ್ತರ ಕೊರಿಯಾ ನಡೆಸುತ್ತಿರುವ ‘ಭಂಡ ಧೈರ್ಯದ’ ಪರಮಾಣು ಅಸ್ತ್ರ ಕಾರ್ಯಕ್ರಮಕ್ಕೆ ಎಚ್ಚರಿಕೆ ನೀಡುವ ಕ್ರಮವಾಗಿ ತನ್ನ ದಾಳಿ ತಂಡವನ್ನು ಕೊರಿಯಾ ಪರ್ಯಾಯ ದ್ವೀಪದತ್ತ ಕಳುಹಿಸಿರುವುದಾಗಿ ಅಮೆರಿಕದ ನೌಕಾಪಡೆ ತಿಳಿಸಿದೆ.

ಅಮೆರಿಕದ ಈ ಕ್ರಮದಿಂದ ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಲಿದೆ. ಸಿರಿಯಾದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿರುವುದು ಪರೋಕ್ಷವಾಗಿ ಉತ್ತರಕೊರಿಯಾಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಸಿದ್ದತೆಯನ್ನು ಕಾಯ್ದುಕೊಳ್ಳಲು ಎಚ್ಚರಿಕೆಯ ಕ್ರಮವಾಗಿ ಕಾರ್ಲ್ ವಿನ್ಸನ್ ದಾಳಿ ತಂಡವನ್ನು ಉತ್ತರದತ್ತ ಸಾಗಲು ಅಮೆರಿಕದ ಪೆಸಿಫಿಕ್ ಕಮಾಂಡ್ ಆದೇಶಿಸಿದೆ ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್‌ನ ವಕ್ತಾರ ಕಮಾಂಡರ್ ಡೇವ್ ಬೆನ್‌ಹ್ಯಾಮ್ ತಿಳಿಸಿದ್ದಾರೆ.

ಉತ್ತರ ಕೊರಿಯಾ ಈ ವಲಯದಲ್ಲಿ ಭದ್ರತೆಗೆ ಎದುರಾಗಿರುವ ಅಗ್ರ ಬೆದರಿಕೆ ಎಂದವರು ವಿಶ್ಲೇಷಿಸಿದ್ದಾರೆ. ಅಮೆರಿಕ ನೌಕಾಪಡೆಯ ದಾಳಿ ತಂಡ ಅತ್ಯಾಧುನಿಕ ಯುಎಸ್‌ಎಸ್ ಕಾರ್ಲ್ ವಿನ್ಸನ್ ಯುದ್ದವಿಮಾನದಿಂದ ಸುಸಜ್ಜಿತವಾಗಿದೆ. ಸಿಂಗಾಪುರದಿಂದ ಇದೀಗ ಈ ದಾಳಿ ತಂಡ ಪಶ್ಚಿಮ ಪೆಸಿಫಿಕ್ ಪ್ರದೇಶದತ್ತ ಸಾಗುತ್ತಿದೆ.

ಸಿರಿಯಾದ ಮೇಲೆ ಅಮೆರಿಕ ನಡೆಸಿದ್ದ ದಾಳಿಯನ್ನು ‘ಸಹಿಸಲಾಗದ ಆಕ್ರಮಣ’ ಎಂದು ದೂಷಿಸಿದ್ದ ಉತ್ತರ ಕೊರಿಯಾ, ಉತ್ತರ ಕೊರಿಯಾವು ಪರಮಾಣು ಶಕ್ತ ರಾಷ್ಟ್ರವಾಗಲು ಬಯಸುತ್ತಿರುವುದನ್ನು ಈ ಘಟನೆ ಸಮರ್ಥಿಸುತ್ತಿದೆ ಎಂದು ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News