ಗೂಢಚರ್ಯೆ ಆರೋಪ: ಭಾರತದ ಮಾಜಿ ನೌಕಾದಳ ಅಧಿಕಾರಿಗೆ ಮರಣದಂಡನೆ ವಿಧಿಸಿದ ಪಾಕ್ ನ್ಯಾಯಾಲಯ

Update: 2017-04-10 11:26 GMT

ಹೊಸದಿಲ್ಲಿ, ಎ.10: ಗೂಢಾಚಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಂಧಿತರಾಗಿದ್ದ ಭಾರತದ ಮಾಜಿ ನೌಕಾದಳ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವೊಂದು ಸೋಮವಾರ ಮರಣದಂಡನೆ ಶಿಕ್ಷೆ ಘೋಷಿಸಿದೆ. ಪಾಕಿಸ್ತಾನದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸಿದ ಆರೋಪವನ್ನೂ ಅವರ ವಿರುದ್ಧ ಮಾಡಲಾಗಿತ್ತು.

ಪಾಕಿಸ್ತಾನ ಸೇನಾ ಕಾಯ್ದೆ 1952 ಇದರ ಸೆಕ್ಷನ್ 59 ಹಾಗೂ ಅಧಿಕೃತ ಗೌಪ್ಯತಾ ಕಾಯ್ದೆ 1923 ಸೆಕ್ಷನ್ 3 ಅನ್ವಯ ಜಾಧವ್ ಅವರ ವಿಚಾರಣೆಯನ್ನು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಮುಖಾಂತರ ನಡೆಸಲಾಗಿತ್ತು.

ತಾವೊಬ್ಬ ರಾ ಏಜಂಟ್ ಹಾಗೂ ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಶಾಂತಿ ಮರುಸ್ಥಾಪಿಸುವ ದೇಶದ ಪ್ರಯತ್ನಗಳಿಗೆ ತೊಡಕುಂಟು ಮಾಡಲು ನೇಮಿಸಲಾಗಿತ್ತೆಂದು ಜಾಧವ್ ತಪೊಪ್ಪಿಕೊಳ್ಳುತ್ತಿರುವ ವೀಡಿಯೋವೊಂದನ್ನು ಪಾಕ್ ಸೇನೆ ಈ ಹಿಂದೆ ಬಿಡುಗಡೆಗೊಳಿಸಿತ್ತು. ಆದರೆ ಈ ವೀಡಿಯೋ ದಾಖಲೆಯಲ್ಲಿ ಹಲವಾರು ನ್ಯೂನತೆಗಳಿರುವುದನ್ನು ಭಾರತೀಯ ಅಧಿಕಾರಿಗಳು ಬೊಟ್ಟು ಮಾಡಿದ್ದರಲ್ಲದೆ ಜಾಧವ್ ಅವರನ್ನು ಬಲವಂತಪಡಿಸಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಿರಬಹುದು ಎಂದು ನಂಬಿದ್ದಾರೆ.

ಇರಾನ್ ದೇಶದ ಚಬಹರ್ ನಲ್ಲಿ ಅವರು ನೆಲೆ ನಿಂತು ಹತ್ತು ವರ್ಷಗಳ ನಂತರ 2013ರಲ್ಲಿ ರಾ ತನ್ನನ್ನು ನೇಮಿಸಿತ್ತೆಂದೂ ಹಾಗೂ 2001ರ ಸಂಸತ್ ದಾಳಿಯ ನಂತರ ಆಂತರಿಕ ಗೂಢಚರ್ಯೆ ನಡೆಸಲು ಭಾರತೀಯ ನೌಕಾದಳ ತನ್ನನ್ನು ನೇಮಿಸಿತ್ತೆಂದೂ ವೀಡಿಯೋದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News