15 ಐಐಐಟಿಗಳಿಗೆ ಪದವಿ ಪ್ರದಾನ ಮಾಡುವ ಅಧಿಕಾರ: ಸರಕಾರದ ಚಿಂತನೆ
ಹೊಸದಿಲ್ಲಿ, ಎ.10: ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಸುಮಾರು 15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಅಧಿಕಾರವನ್ನು ಶೀಘ್ರವೇ ಪಡೆಯಲಿವೆ.
ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಲೋಕಸಭೆಯಲ್ಲಿ - ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಖಾಸಗಿ- ಸರಕಾರಿ ಸಹಭಾಗಿತ್ವ) ಮಸೂದೆ 2017ನ್ನು ಮಂಡಿಸಿದರು. ಈ ಮಸೂದೆಯು 15 ಐಐಐಟಿಗಳಿಗೆ ಪದವಿ ಪ್ರದಾನ ಮಾಡುವ ಅಧಿಕಾರ ನೀಡುತ್ತದೆ.
ಈ ಸಂಸ್ಥೆಗಳಿಗೆ ಶಾಸನಬದ್ಧ ಮಾನ್ಯತೆ ನೀಡುವ ಅಗತ್ಯವಿದೆ. ಪದವಿ ಪ್ರದಾನ ಮಾಡುವ ಅಧಿಕಾರವು ಈ ಸಂಸ್ಥೆಗಳ ಸ್ವೀಕಾರಾರ್ಹತೆಯನ್ನು ವೃದ್ಧಿಸುತ್ತದೆ. ಈ 15 ಸಂಸ್ಥೆಗಳಲ್ಲಿ ಐದು ಸಂಸ್ಥೆಗಳ ವಿದ್ಯಾರ್ಥಿಗಳು ಈ ವರ್ಷದ ಆಗಸ್ಟ್‌ನಲ್ಲಿ ತಮ್ಮ ಪದವಿ ಪೂರೈಸಲಿರುವ ಹಿನ್ನೆಲೆಯಲ್ಲಿ ಈ ಅಧಿಕಾರವನ್ನು ಅತಿ ಶೀಘ್ರ ನೀಡಬೇಕಿದೆ ಎಂದು ಮಸೂದೆಯಲ್ಲಿರುವ ಆಕ್ಷೇಪ ಮತ್ತು ಕಾರಣ ಎಂಬ ವಿಭಾಗದಲ್ಲಿ ಉಲ್ಲೇಖಿಸಲಾಗಿದೆ. ದೇಶದ ಮಾಹಿತಿ ತಂತ್ರಜ್ಞಾನ ಕೈಗಾರಿಕಾ ವಲಯವು ಎದುರಿಸುತ್ತಿರುವ ಸವಾಲಿನ ಹಿನ್ನೆಲೆಯಲ್ಲಿ, ಖಾಸಗಿ-ಸರಕಾರಿ ಕ್ಷೇತ್ರದಲ್ಲಿ 20 ಐಐಐಟಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿತ್ತು.