ಇನ್ನು ಮೊಬೈಲ್ ಪೋನ್ ಮೂಲಕ ಪಿಎಫ್ ಪಾವತಿ ಸಾಧ್ಯ
ಹೊಸದಿಲ್ಲಿ, ಎ.10: ಮೊಬೈಲ್ ಆ್ಯಪ್ ಮೂಲಕ ಭವಿಷ್ಯನಿಧಿ(ಪಿಎಫ್) ಹಣವನ್ನು ಮರಳಿ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ತಿಳಿಸಿದರು.
ಈ ಹೊಸ ಆ್ಯಪ್ ಅನ್ನು ‘ ನೂತನ ಆಡಳಿತಕ್ಕಾಗಿನ ಏಕೀಕೃತ ಮೊಬೈಲ್ ಅಪ್ಲಿಕೇಷನ್’ (ಉಮಂಗ್) ಜೊತೆ ಸಂಘಟಿತಗೊಳಿಸಲಾಗುವುದು. ಈ ಮೂಲಕ ಅಂತರ್ಜಾಲದ ಮೂಲಕ ಭವಿಷ್ಯನಿಧಿ ಪಡೆಯುವ ಬೇಡಿಕೆ ಮಂಡಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದರು.
ಭವಿಷ್ಯನಿಧಿ ಇತ್ಯರ್ಥಗೊಳಿಸಲು ಕೋರಿ ಕೈಬರಹದಲ್ಲಿ ಸುಮಾರು 1 ಕೋಟಿ ಅರ್ಜಿಗಳನ್ನು ಇಪಿಎಫ್‌ಒ (ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ)ಗೆ ಕಳಿಸಲಾಗಿದೆ. ಇಪಿಎಫ್‌ಒದ 110ಕ್ಕೂ ಹೆಚ್ಚಿನ ಪ್ರಾದೇಶಿಕ ಕಚೇರಿಗಳನ್ನು ಕೇಂದ್ರದ ಸರ್ವರ್‌ಗೆ ಜೋಡಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಕೇಂದ್ರ ಕಚೇರಿಯ ಸರ್ವರ್‌ಗೆ ಜೋಡಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.