ಸಿರಿಯ ದಾಳಿ ಉತ್ತರ ಕೊರಿಯಕ್ಕೂ ಎಚ್ಚರಿಕೆ : ಟಿಲರ್‌ಸನ್

Update: 2017-04-10 14:55 GMT

ವಾಶಿಂಗ್ಟನ್, ಎ. 10: ರಾಸಾಯನಿಕ ಅಸ್ತ್ರಗಳನ್ನು ಬಳಸಿದ ಕಾರಣಕ್ಕಾಗಿ ಸಿರಿಯದ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯು, ಉತ್ತರ ಕೊರಿಯ ಸೇರಿದಂತೆ ಇತರ ದೇಶಗಳಿಗೂ ಎಚ್ಚರಿಕೆಯಾಗಿದೆ ಎಂದು ವಿದೇಶಾಂಗ ಕಾರ್ಯದಶಿ ರೆಕ್ಸ್ ಟಿಲರ್‌ಸನ್ ರವಿವಾರ ಹೇಳಿದ್ದಾರೆ.

ಯಾವುದೇ ದೇಶ ಅಪಾಯಕಾರಿ ಎಂದು ಮನದಟ್ಟದಾರೆ, ಅಮೆರಿಕವು ಅದಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಗರಿಷ್ಠವಾಗಿದೆ ಎಂದು ಅವರು ನುಡಿದರು.

ಕಳೆದ ವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಸಭೆಯ ಬಳಿಕ, ಉತ್ತರ ಕೊರಿಯದ ಪರಮಾಣು ಅಸ್ತ್ರಗಳ ಸಮಸ್ಯೆಯನ್ನು ನಿಭಾಯಿಸಲು ಕ್ರಮ ಅಗತ್ಯ ಎನ್ನುವುದನ್ನು ಚೀನಾವೂ ಒಪ್ಪಿಕೊಂಡಿದೆ ಎಂದು ಟಿಲರ್‌ಸನ್ ಹೇಳಿದರು.

ಎಬಿಸಿ ಸುದ್ದಿ ಚಾನೆಲ್‌ನ ‘ದಿಸ್ ವೀಕ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಿರಿಯದ ವಿರುದ್ಧ ಶುಕ್ರವಾರ ನಡೆಸಿದ ದಾಳಿ ಉತ್ತರ ಕೊರಿಯಕ್ಕೆ ಎಚ್ಚರಿಕೆಯ ಸಂದೇಶವೇ ಎಂಬ ಪ್ರಶ್ನೆಗೆ ಉತ್ತರಿಸಿದ ಟಿಲರ್‌ಸನ್, ‘‘ನೀವು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದರೆ, ನಿಮ್ಮ ಬದ್ಧತೆಗಳನ್ನು ಈಡೇರಿಸಲು ನೀವು ವಿಫಲರಾದರೆ, ನೀವು ಇತರರಿಗೆ ಬೆದರಿಕೆಯಾದರೆ ಒಂದು ಹಂತದಲ್ಲಿ ಅದಕ್ಕೆ ಪ್ರತಿಕ್ರಿಯೆ ಖಂಡಿತವಾಗಿಯೂ ಇರುತ್ತದೆ ಎಂಬ ಸಂದೇಶವನ್ನು ಯಾವುದೇ ದೇಶ ಪಡೆದುಕೊಳ್ಳಬಹುದು’’ ಎಂದರು.

‘‘ಉತ್ತರ ಕೊರಿಯದ ಮಟ್ಟಿಗೆ ಹೇಳುವುದಾದರೆ, ಪರಮಾಣುರಹಿತ ಕೊರಿಯ ಪರ್ಯಾಯ ದ್ವೀಪ ನಮ್ಮ ಉದ್ದೇಶವಾಗಿದೆ ಎನ್ನುವುದನ್ನು ನಾವು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಹೇಳುತ್ತೇವೆ’’ ಎಂದು ಟಿಲರ್‌ಸನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News