×
Ad

ಹಣದ ಹೊಳೆ: ತ.ನಾ. ಉಪಚುನಾವಣೆ ರದ್ದು

Update: 2017-04-10 23:50 IST

ಹೊಸದಿಲ್ಲಿ, ಎ.10: ರಾಜಕೀಯ ಪಕ್ಷಗಳು ಹಣಬಲದ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಗಂಭೀರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ತಿಂಗಳ 12ರಂದು ನಡೆಯ ಬೇಕಿದ್ದ ತಮಿಳುನಾಡಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದು ಮಾಡಿದೆ.
ತಮಿಳುನಾಡು ಚುನಾವಣಾ ಅಧಿಕಾರಿಗಳ ಜೊತೆಗೆ ಹಲವು ಸುತ್ತುಗಳ ಮಾತುಕತೆ ನಡೆಸಿದ ಬಳಿಕ ಚುನಾವಣಾ ಅಧಿಸೂಚನೆಯನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿತು. ಹಣ ಮತ್ತು ಉಡುಗೊರೆಗಳನ್ನು ವಿತರಿಸಿದ ಪರಿಣಾಮ ಸಂಪೂರ್ಣವಾಗಿ ಮಾಸಿದ ಬಳಿಕ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪ್ರಸ್ತುತ ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೆ ಸಂಪೂರ್ಣ ತೃಪ್ತಿ ಇದೆ. ಆದರೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ತಮಿಳುನಾಡಿನಲ್ಲಿ ಗಂಭೀರವಾಗಿ ಇದರ ಉಲ್ಲಂಘನೆಯಾಗಿದೆ. ಹಣ ಹಾಗೂ ಉಡುಗೊರೆಗಳ ವಿತರಣೆ ಮಾಡಿ ಮತದಾರರನ್ನು ಓಲೈಸುವ ಪ್ರಯತ್ನ ನಡೆದಿದೆ ಎಂದು ರವಿವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ ಆಯೋಗ ಹೇಳಿದೆ.
ಆದಾಯ ತೆರಿಗೆ ಇಲಾಖೆಯ ಶೋಧನಾ ವಿಭಾಗ ತಮಿಳುನಾಡಿನ ಆರೋಗ್ಯ ಖಾತೆ ಸಚಿವ ಸಿ.ವಿಜಯ ಭಾಸ್ಕರ್ ಅವರ ಕಚೇರಿ ಹಾಗೂ ಆಸ್ತಿಪಾಸ್ತಿಗಳ ಮೇಲೆ ಶುಕ್ರವಾರ ದಾಳಿ ನಡೆಸಿತ್ತು. ವಿಜಯ ಭಾಸ್ಕರ್ ಅವರು ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ವಿತರಿಸುವ ಸಲುವಾಗಿ 89 ಕೋಟಿ ರೂ.ಯನ್ನು ಸಂಗ್ರಹಿಸಿದ್ದನ್ನು ಸಚಿವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಜಯಭಾಸ್ಕರ್ ಅವರು ಎಐಎಡಿಎಂಕೆ ಅಮ್ಮಾ ಬಣದ ಅಭ್ಯರ್ಥಿ ಟಿ.ಟಿ.ವಿ.ದಿನಕರ್ ಅವರ ಅನುಯಾಯಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News