"ನಾವೇ ತೋಡಿದ ಬಾವಿಯ ನೀರು ನಮಗಿಲ್ಲ, ನಾವೇ ಮಾಡಿದ ಮೂರ್ತಿಯನ್ನು ನಾವು ಮುಟ್ಟುವಂತಿಲ್ಲ!"
ಭೋಪಾಲ್, ಎ.11: "ನೀವು ನಮ್ಮಿಂದ ಬಾವಿ ತೋಡಿಸಿದಿರಿ; ಆದರೆ ನಾವು ನೀರು ಕುಡಿಯದಂತೆ ತಡೆದಿರಿ; ನಾವು ಮೂರ್ತಿಗಳನ್ನು ಮಾಡಿದೆವು; ಆದರೆ ದೇವಸ್ಥಾನದ ಬಾಗಿಲುಗಳು ನಮಗೆ ಮುಚ್ಚಿದವು"- ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್‌ಚಂದ್ ಗೆಹ್ಲೋಟ್ ಜಾತೀಯತೆ ವಿರುದ್ಧ ಹರಿಹಾಯ್ದದ್ದು ಹೀಗೆ.
ಉಜ್ಜಯಿನಿ ಜಿಲ್ಲೆ ನಗೋಡಾದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, "ನೀವು ನಮ್ಮಿಂದ ಬಾವಿ ತೋಡಿಸಿದಿರಿ. ಅದು ನಿಮ್ಮದಾದ ತಕ್ಷಣ ನಾವು ಅದರ ನೀರು ಕುಡಿಯದಂತೆ ತಡೆದಿರಿ. ಒಂದು ಕೆರೆ ಮಾಡಬೇಕಾದಾಗ ಕೂಲಿಗಳಾದವರು ನಾವು. ಆಗ ಅಲ್ಲಿ ನಾವು ಉಗುಳುತ್ತೇವೆ. ನಮ್ಮ ಬೆವರು ಸುರಿಯುತ್ತದೆ. ಮೂತ್ರ ಮಾಡುತ್ತೇವೆ. ಆದರೆ ಅದರಿಂದ ನೀರು ಕುಡಿಯುವ ಅವಕಾಶ ಸಿಕ್ಕಿದಾಗ, ನೀರು ಮಲಿನವಾಗುತ್ತದೆ ಎನ್ನುತ್ತೀರಿ. ದೇವಸ್ಥಾನಗಳಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತೀರಿ. ಬಳಿಕ ನಮ್ಮ ಪಾಲಿಗೆ ದೇವಸ್ಥಾನದ ಬಾಗಿಲು ಮುಚ್ಚುತ್ತದೆ. ಯಾರು ಇದನ್ನು ಸರಿ ಮಾಡಬೇಕು? ಮೂರ್ತಿ ಕೆತ್ತಿದವರು ನಾವು; ನೀವು ಅದಕ್ಕೆ ಹಣ ಕೊಟ್ಟರೂ ಶ್ರಮ ನಮ್ಮದು. ಆದರೆ ಕನಿಷ್ಠ ನಾವು ಅದರ ದರ್ಶನ ಮಾಡಿ ಸ್ಪರ್ಶಿಸುತ್ತೇವೆ" ಎಂದು ವಿವರಿಸಿದರು.
ಇಂಡಿಯನ್ ಎಕ್ಸ್‌ಪ್ರೆಸ್, ಸಚಿವರನ್ನು ದಿಲ್ಲಿಯಲ್ಲಿ ಸಂಪರ್ಕಿಸಿದಾಗ, ಅಂಬೇಡ್ಕರ್ ಬದುಕಿದ್ದ ಕಾಲದಲ್ಲಿ ಅವರು ಎದುರಿಸಿದ ತಾರತಮ್ಯ ಮನವರಿಕೆ ಮಾಡಲು ಹೀಗೆ ಹೇಳಿದ್ದಾಗಿ ಸ್ಪಷ್ಟಪಡಿಸಿದರು. ಅದಾಗ್ಯೂ ತಾವು ಇಂದಿನ ಸ್ಥಿತಿಯನ್ನು ತೆರೆದಿಟ್ಟದ್ದಾಗಿಯೂ ಒಪ್ಪಿಕೊಂಡರು. ಸ್ವಲ್ಪಮಟ್ಟಿಗೆ ಈಗ ಸುಧಾರಣೆಯಾಗಿದ್ದರೂ ಇಂಥ ಕೆಲ ಘಟನೆಗಳು ಇಂದಿಗೂ ವರದಿಯಾಗುತ್ತಿವೆ" ಎಂದು ಸಮರ್ಥಿಸಿಕೊಂಡರು.
"ನಾನು ಸಚಿವ. ಇಂಥ ವರದಿಗಳು ಬರುತ್ತಲೇ ಇರುತ್ತವೆ. ಅದು ಕಡಿಮೆಯಾಗಿರಬಹುದು. ಆದರೆ ಇಂದಿಗೂ ಸಮಾಜದಲ್ಲಿ ಈ ಸ್ಥಿತಿ ಇದೆ"
ಪರಿಶಿಷ್ಟ ಜಾತಿಗೆ ಸೇರಿದ ಗೆಹ್ಲೋಟ್ ತಾವು ಕೂಡಾ ಯುವಕರಾಗಿದ್ದಾಗ ಇಂಥ ತಾರತಮ್ಯ ಎದುರಿಸಿದ್ದಾಗಿ ವಿವರಿಸಿದರು. ರತ್ಲಾನ್ ಹಾಸ್ಟೆಲ್‌ನಲ್ಲಿ ಕೆಳಜಾತಿಯ ವಿದ್ಯಾರ್ಥಿಗಳಿಗೆ ದೇವಸ್ಥಾನ ಭೇಟಿಗೆ ಭದ್ರತೆ ಒದಗಿಸಬೇಕಾಗುತ್ತಿತ್ತು ಎಂದು ನೆನಪಿಸಿಕೊಂಡರು.
ಉಜ್ಜಯಿನಿ ಜಿಲ್ಲೆ ರುಪೆಟಾ ಜಿಲ್ಲೆಯಲ್ಲಿ ಜನಿಸಿದ ಗೆಹ್ಲೋಟ್ (68) ಮಧ್ಯಪ್ರದೇಶ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು. 1990-92ರ ಅವಧಿಯಲ್ಲಿ ರಾಜ್ಯ ಸಚಿವರಾಗಿದ್ದರು. 1996ರಲ್ಲಿ ಮೊಟ್ಟಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಬಳಿಕ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದರು. 2012ರಲ್ಲಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಯಿತು.