×
Ad

ಕುಲಭೂಷಣ್ ಬಿಡುಗಡೆಗೆ ಪ್ರಧಾನಮಂತ್ರಿ ಮಧ್ಯಪ್ರವೇಶಿಸಲಿ: ಕಾಂಗ್ರೆಸ್

Update: 2017-04-11 12:11 IST

ಹೊಸದಿಲ್ಲಿ, ಎ.11: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ರನ್ನು ಸುರಕ್ಷಿತವಾಗಿ ಬಿಡುಗಡೆಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರ ಆಗ್ರಹಿಸಿದೆ.

 ಸರಣಿ ಟ್ವೀಟ್‌ಮಾಡಿದ ಕಾಂಗ್ರೆಸ್‌ನ ವಕ್ತಾರ ರಣದೀಪ್ ಎಸ್.ಸುರ್ಜೇವಾಲಾ,‘‘ ಭಾರತ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಆಕ್ರಮಣಕಾರಿತನ ಪ್ರದರ್ಶಿಸಿ ಜಾಧವ್‌ರನ್ನು ಬಿಡುಗಡೆ ಮಾಡುವ ನಿಟ್ಟಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪಾಕಿಸ್ತಾನ ನ್ಯಾಯಾಲಯ ಸೌಜನ್ಯಕ್ಕೂ ಭಾರತದ ಗಮನಕ್ಕೆ ತಾರದೆ ಅವಸರವಾಗಿ ಪೂರ್ವ ನಿರ್ಧರಿತವಾಗಿ ಜಾಧವ್ ವಿರುದ್ಧ ಮರಣ ದಂಡನೆ ತೀರ್ಪು ನೀಡಿದೆ’’ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಬಲೂಚಿಸ್ತಾನದಲ್ಲಿ ಕುಲ್‌ಭೂಷಣ್ ಜಾಧವ್‌ರನ್ನು ಬಂಧಿಸಿದ್ದ ಪಾಕಿಸ್ತಾನ ಜಾಧವ್ ವಿರುದ್ಧ ಪ್ರತ್ಯೇಕತಾವಾದಿ ಚಳವಳಿಗೆ ಉತ್ತೇಜನ ನೀಡಿದ ಆರೋಪವನ್ನು ಹೊರಿಸಿತ್ತು.

ಕುಲಭೂಷಣ್‌ಗೆ ಪಾಕಿಸ್ತಾನ ಮರಣದಂಡನೆ ವಿಧಿಸಿದ ವಿಚಾರ ಸಂಸತ್‌ನಲ್ಲಿ ಪ್ರತಿಧ್ವನಿಸಿದ್ದು ಪಕ್ಷ ಭೇದ ಮರೆತು ಪಾಕ್ ನ್ಯಾಯಾಲಯದ ತೀರ್ಪನ್ನು ಖಂಡಿಸಲಾಯಿತು.

ಜಾಧವ್ ಬದುಕಿ ಉಳಿಯದಿದ್ದರೆ ಅದು ಸರಕಾರದ ವೈಫಲ್ಯ. ಜಾಧವ್ ಪ್ರಾಣ ಉಳಿಸುವುದು ಸರಕಾರದ ಕರ್ತವ್ಯ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News