ಸಿರಿಯ ಜೊತೆ ಸಂಬಂಧ ತೊರೆಯಲು ರಶ್ಯಕ್ಕೆ ಜಿ7 ಒತ್ತಾಯ
Update: 2017-04-11 20:31 IST
ಲ್ಯೂಕ (ಇಟಲಿ), ಎ. 11: ಇಟಲಿಯಲ್ಲಿ ಸೋಮವಾರ ಸಭೆ ಸೇರಿರುವ ಜಿ7 ದೇಶಗಳ ವಿದೇಶ ಸಚಿವರು, ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್ ಜೊತೆಗಿನ ಬಾಂಧವ್ಯಗಳನ್ನು ಕಡಿದುಕೊಳ್ಳುವಂತೆ ರಶ್ಯದ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.
ಕಳೆದ ವಾರ ಸಿರಿಯದ ಸೇನೆಯು ನಾಗರಿಕರ ಮೇಲೆ ರಾಸಾಯನಿಕ ದಾಳಿ ನಡೆಸಿದೆಯೆನ್ನಲಾದ ಘಟನೆಯ ಬಳಿಕ ಅಮೆರಿಕ, ಸಿರಿಯ ಕುರಿತ ತನ್ನ ನಿಲುವನ್ನು ಬದಲಿಸಿಕೊಂಡು ಅದರ ವಾಯು ನೆಲೆಯೊಂದರ ಮೇಲೆ ದಾಳಿ ನಡೆಸಿದೆ.
ರಾಸಾಯನಿಕ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಹಾಗೂ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
ಸಿರಿಯದ ಅಧ್ಯಕ್ಷರಿಗೆ ಬೆಂಬಲ ನೀಡುವುದೆಂದರೆ, ರಶ್ಯದ ಘನತೆಯನ್ನು ವಿಷಮಯಗೊಳಿಸಿದಂತೆ ಎಂದು ಬ್ರಿಟಿಶ್ ವಿದೇಶ ಕಾರ್ಯದರ್ಶಿ ಬೊರಿಸ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.
ರಶ್ಯ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅದರ ವಿರುದ್ಧ ದಿಗ್ಬಂಧನೆಗಳನ್ನು ವಿಧಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.