ಹಾಲಾಡಿ: ನಿವೇಶನರಹಿತರಿಂದ ಶಾಸಕರ ಮನೆ ಚಲೋ

Update: 2017-04-11 18:30 GMT

ಕುಂದಾಪುರ, ಎ.11: ಭೂಮಿ ಹಕ್ಕಿನ ಹೋರಾಟದ ಅಂಗವಾಗಿ ಮನೆ ನಿವೇಶನಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಕುಂದಾಪುರದ ಶಾಸಕರ ಮನೆ ಚಲೋ ಕಾರ್ಯಕ್ರಮವನ್ನು ಹಾಲಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದಕ್ಕೂ ಮುನ್ನ ಹಾಲಾಡಿ ಬಸ್ ನಿಲ್ದಾಣದ ಬಳಿ ನಡೆದ ಸಭೆಯನ್ನುದ್ದೇಶಿಸಿ ಕೃಷಿ ಕೂಲಿಕಾರ ಸಂಘದ ರಾಜಾಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನಿವೇಶನರಹಿತ ರಿಗೆ ನಿವೇಶನ ನೀಡುತ್ತಿಲ್ಲ. ಈ ಬಗ್ಗೆ ಗ್ರಾಪಂಗಳು ಅಂತಿಮ ಪಟ್ಟಿ ತಯಾರಿಸಿ ದರೂ ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರುತ್ತಿಲ್ಲ. ಆದುದರಿಂದ ಶಾಸಕರು ಈ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ನಂತರ ನೂರಾರು ಮನೆ ನಿವೇಶನರಹಿತರು ಮೆರವಣಿಗೆ ಮೂಲಕ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಮನೆಗೆ ತೆರಳಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈ ಕುರಿತು ಸದನದಲ್ಲಿ ಮಾತನಾಡಿ ತಮ್ಮ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಲಾಗುವುದು. ಎ.25ರಂದು ಅಧಿಕಾರಿಗಳ ಜಂಟಿ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆ ಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಎಚ್.ನರಸಿಂಹ, ವಿಠಲ ಪೂಜಾರಿ, ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗರ್, ದಾಸು ಭಂಡಾರಿ, ಪದ್ಮಾವತಿ ಶೆಟ್ಟಿ, ನಾಗರತ್ನಾ ನಾಡ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News