×
Ad

ನೋಟುಬಂದಿ: 17 ಕೋಟಿ ಠೇವಣಿ ಇಟ್ಟ ಆರೆಸ್ಸೆಸ್ ಮುಖಂಡನಿಗೆ ಐಟಿ ಪೇಚು

Update: 2017-04-12 08:59 IST

ಹೊಸದಿಲ್ಲಿ, ಎ.12: ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ 17 ಕೋಟಿ ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಠೇವಣಿ ಮಾಡಿದ್ದ ಆರೆಸ್ಸೆಸ್ ಮುಖಂಡರಿಗೆ ಸೇರಿದ ಜವಳಿ ಕಂಪನಿಯೊಂದರ ಬಗ್ಗೆ ಇದೀಗ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.

ಅಹುಜಾಸನ್ಸ್ ಶಾಲ್‌ವಾಲೆ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಕುಲಭೂಷಣ್ ಅಹುಜಾ ಅವರು ಆರೆಸ್ಸೆಸ್‌ನ ದೆಹಲಿ ಪ್ರಾಂತ ಸಂಘ ಚಾಲಕ ಅಂದರೆ ದೆಹಲಿ ರಾಜ್ಯದ ಮುಖ್ಯಸ್ಥ. ಕಂಪೆನಿ  ದಾಖಲೆಗಳ ಪ್ರಕಾರ, ಕಂಪೆನಿಗೆ ಇತರ ಮೂವರು ನಿರ್ದೇಶಕರಿದ್ದಾರೆ. ಅಹುಜಾ ಅವರ ಮಕ್ಕಳಾದ ಭುವನ್ ಹಾಗೂ ಕರಣ್ ಮತ್ತು ಸೊಸೆ ನಿಧಿ ನಿರ್ದೇಶಕರಾಗಿದ್ದಾರೆ.

ಈ ಕಂಪೆನಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 6 ಕೋಟಿ ರೂಪಾಯಿಗಳನ್ನು ಠೇವಣಿ ಮಾಡಿತ್ತು ಎನ್ನಲಾಗಿದೆ. ಪಾಶ್ಮಿನಾ ಶಾಲು ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಹುಜಾಸನ್ಸ್ ಶಾಲ್‌ವಾಲೆ, ಕರೋಲ್‌ಬಾಗ್ ಹಾಗೂ ಖಾನ್‌ಮಾರ್ಕೆಟ್‌ನಲ್ಲಿ ಷೋರೂಂ ಹೊಂದಿದೆ. ಬಾಲ್ಯದಿಂದಲೇ ಅಹುಜಾ ಆರೆಸ್ಸೆಸ್ ಕಾರ್ಯಕರ್ತ.

ಆದರೆ ಐಟಿ ದಾಳಿ ಅಥವಾ ತನಿಖೆ ಬಗ್ಗೆ ಪ್ರತಿಕ್ರಿಯಿಸಲು ಅಹುಜಾ ನಿರಾಕರಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132 ಅನ್ವಯ ಅಹುಜಾ ಅವರ ಷೋರೂಂಗಳ ಮೇಲೆ ಫೆಬ್ರವರಿ 22ರಂದು ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಕಂಪನಿ ನಕಲಿ ಬಿಲ್ ಸೃಷ್ಟಿಸಿ ಹಳೆ ನೋಟುಗಳನ್ನು ಸಮರ್ಥಿಸಿಕೊಂಡಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ನೋಟು ನಿಷೇಧದ ಬಳಿಕ ಕಂಪನಿ ಸುಮಾರು 17 ಕೋಟಿ ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಠೇವಣಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News