ಎನ್‌ಡಿಎ ಸಭೆಯಲ್ಲಿ ಬೀಫ್, ಬಿಯರ್ ಚರ್ಚೆ!

Update: 2017-04-12 03:40 GMT

ಹೊಸದಿಲ್ಲಿ, ಎ.12: ಕೇಂದ್ರದಲ್ಲಿ ಅಧಿಕಾರರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್‌ಡಿಎ)ದ ಮಹತ್ವದ ಸಭೆಯಲ್ಲಿ ಬೀಫ್ ವಿವಾದ ಹಾಗೂ ಬಿಯರ್ ವಿವಾದ ಚರ್ಚೆಗೆ ಬಂದ ಕುತೂಹಲಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಕೇರಳದಲ್ಲಿ ಬಿಜೆಪಿಯ ಮೈತ್ರಿಪಕ್ಷದ ಸದಸ್ಯರೊಬ್ಬರು ಬೀಫ್ ವಿವಾದವನ್ನು ಸಭೆಯಲ್ಲಿ ಪ್ರಸ್ತಾಪಿಸಿದರೆ, ಗೋವಾ ಮಿತ್ರಪಕ್ಷದ ಸದಸ್ಯರೊಬ್ಬರು, ಹೆದ್ದಾರಿ ಪಕ್ಕ ಮದ್ಯಮಾರಾಟ ನಿಷೇಧಿಸಿದ ಮತ್ತು ಗೋವಾದಲ್ಲಿ 10 ಗಂಟೆ ಬಳಿಕ ಸಂಗೀತ ನಿಷೇಧ ಹೇರಿದ ಕ್ರಮವನ್ನು ಪ್ರಸ್ತಾಪಿಸಿದರು.

ಸೋಮವಾರ ಸಂಜೆ ನಡೆದ ಎನ್‌ಡಿಎ ಅಂಗಪಕ್ಷಗಳ ವಿಸ್ತ್ರತ ಸಭೆಯಲ್ಲಿ ಜನಾಧಿಪತ್ಯ ಊರು ವಿಕಾಸನ ಮುನ್ನಳಿಯ ನಾಯಕಿ ಹಾಗೂ ಕೇರಳದ ಬುಡಕಟ್ಟು ಮುಖಂಡರಾದ ಸಿ.ಕೆ.ಜಾನು ಮಾತನಾಡಿ, "ಸರ್ಕಾರ ದುರ್ಬಲವರ್ಗದವರಿಗೆ, ದಲಿತರಿಗೆ, ಬುಡಕಟ್ಟು ಜನಾಂಗದವರಿಗೆ ಸೌಲಭ್ಯ ನೀಡಲು ಮುಂದಾಗಬೇಕೇ ವಿನಃ ಬೀಫ್‌ನಂಥ ವಿವಾದ ಹುಟ್ಟುಹಾಕುವುದಕ್ಕೆ ಅಲ್ಲ" ಎಂದು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

ಕೇರಳ ಕಾಂಗ್ರೆಸ್ (ಟಿ) ಮುಖಂಡ ಪಿ.ಸಿ.ಥಾಮಸ್ ಇದನ್ನು ದೃಢಪಡಿಸಿದ್ದು, ಜಾನು ಮಲಯಾಳಂಬಲ್ಲಿ ಮಾತನಾಡಿದ್ದನ್ನು ತಾವು ಭಾಷಾಂತರಿಸಿದ್ದಾಗಿ ದೃಢಪಡಿಸಿದ್ದಾರೆ. ಜಾನು ಹೇಳಿಕೆಯನ್ನು ಬೆಂಬಿಸಿದ ಅವರು, ಸಂವಿಧಾನದ ನೀತಿ ನಿರ್ದೇಶನದಲ್ಲಿ ಗೋಹತ್ಯೆ ನಿಷೇಧದ ಉಲ್ಲೇಖವಿದೆ ಎಂಬ ಕಾರಣಕ್ಕೆ ಯಾವ ಸರಕಾರವೂ ಗೋಮಾಂಸ ನಿಷೇಧಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋವಾದಲ್ಲಿ ರಾತ್ರಿ 10ರ ಬಳಿಕ ಸಂಗೀತವನ್ನು ಹಾಗೂ ಹೆದ್ದಾರಿ ಬಳಿ ಮದ್ಯ ನಿಷೇಧಿಸಿದ ಸುಪ್ರೀಂಕೋರ್ಟ್ ಕ್ರಮವನ್ನು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ವಿಜಯ್ ಸರ್‌ದೇಸಾಯಿ ಪ್ರಸ್ತಾಪಿಸಿದರು. ಗೋವಾ ಜನತೆ ತಮ್ಮ ಸಾಂಸ್ಕೃತಿಕ ಪರಂಪರೆ ಹಾಗೂ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಲು ಅವಕಾಶ ನೀಡಬೇಕು. ಗೋವಾ ವಿವಾಹ ಸಮಾರಂಭಗಳ ಗಮ್ಯತಾಣವಾಗಿರುವುದು ಈ ಕಾರಣಕ್ಕೆ. ರಾತ್ರಿ 10ರ ಬಳಿಕ ಸಂಗೀತ ನಿಷೇಧಿಸಲು ಹೇಗೆ ಸಾಧ್ಯ? ಇದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದು, ರಾಜ್ಯಗಳು ಅಗತ್ಯ ನಿಯಮಾವಳಿ ರೂಪಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News