ಕ್ಯಾನ್ಸರ್ ಬಾಧಿಸಲು ಕಾರಣವೆನ್ನಲಾದ ಮೊಬೈಲ್ ಟವರನ್ನು ಒಂದು ವಾರದೊಳಗೆ ಮುಚ್ಚಲು ಸುಪ್ರೀಂ ಆದೇಶ

Update: 2017-04-12 05:37 GMT

ಹೊಸದಿಲ್ಲಿ, ಎ.12: ಹದಿನಾಲ್ಕು ವರ್ಷಗಳಿಂದ ಮೊಬೈಲ್ ಟವರಿನಿಂದ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದಾಗಿಯೇ ತಾನು ಕ್ಯಾನ್ಸರ್ ಗೆ ತುತ್ತಾಗಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರಿಗೆ ಸಂಬಂಧಿಸಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಮೊಬೈಲ್ ಟವರನ್ನು ಮುಚ್ಚಲು ಆದೇಶ ನೀಡಿದೆ.

ಗ್ವಾಲಿಯರ್ ನಗರದ ದಾಲ್ ಬಜಾರ್ ಪ್ರದೇಶದ ನಿವಾಸಿ ಪ್ರಕಾಶ್ ಶರ್ಮ ಅವರ ಮನೆ ಕೆಲಸದಾಳು ಆಗಿರುವ 42 ವರ್ಷದ ಹರೀಶ್ ಚಂದ್ ತಿವಾರಿ ಎಂಬವರ ಪ್ರಯತ್ನದ ಫಲವಾಗಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ನೆರೆಮನೆಯವರು ತಮ್ಮ ಮನೆಯ ತಾರಸಿಯಲ್ಲಿ 2002ರಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಮೊಬೈಲ್ ಟವರ್ ನಿಂದಾಗಿ ತಾನು ದಿನದ 24 ಗಂಟೆಯೂ ವಿಕಿರಣಗಳಿಂದ ಬಾಧಿತನಾಗಿದ್ದೇನೆ ಎಂದವರು ದೂರು ನೀಡಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ರಂಜನ್ ಗೊಗೊಯಿ ಹಾಗೂ ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠ ಈ ಮೊಬೈಲ್ ಟವರ್ ಕಾರ್ಯನಿರ್ವಹಣೆಯನ್ನು ಏಳು ದಿನಗಳೊಳಗೆ ಸ್ಥಗಿತಗೊಳಿಸುವಂತೆ ಬಿಎಸ್ಸೆನ್ನೆಲ್ ಗೆ ಆದೇಶಿಸಿದ್ದಾರೆ. ವಿಕಿರಣಗಳಿಂದ ಅಪಾಯವಾಗಿದೆ ಎಂದು ದೂರಿದ ವ್ಯಕ್ತಿಯೊಬ್ಬರ ಅಪೀಲಿನ ಆಧಾರದಲ್ಲಿ ಮೊಬೈಲ್ ಟವರೊಂದನ್ನು ಸುಪ್ರೀಂ ಕೋರ್ಟ್ ಮುಚ್ಚಿಸಿದ ಪ್ರಥಮ ಪ್ರಕರಣ ಇದಾಗಿದೆ.

ಮೊಬೈಲ್ ಟವರ್ ಗಳಿಂದ ಹೊರಸೂಸುವ ವಿಕಿರಗಣಗಳ ಅಪಾಯದ ಬಗ್ಗೆ ಸುಪ್ರೀಂ ಕೋರ್ಟಿನ ಈ ತೀರ್ಪು ಮತ್ತೆ ಚರ್ಚೆಗೆ ಆಸ್ಪದ ನೀಡಲಿದೆಯೆಂದು ನಂಬಲಾಗಿದೆ. ಕಳೆದ ವರ್ಷದ ಮಾರ್ಚ್ 18ರಿಂದ ಮೊಬೈಲ್ ಟವರ್ ಅಪಾಯಗಳ ಕುರಿತ ಅಪೀಲುಗಳ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್, ಈ ವಿಕಿರಣಗಳು ಮನುಷ್ಯರು ಹಾಗೂ ಪ್ರಾಣಿಗಳಿಗೆ ಅಪಾಯಕಾರಿ ಎಂಬುದನ್ನು ಸಾಬೀತುಡಿಸಲು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಸಂಬಂಧಿತರಿಗೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News