×
Ad

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ವಿಶೇಷ ತರಬೇತಿ ಪಡೆದ 551 ಭಾರತೀಯ ಕಮಾಂಡೋಗಳು ಏನು ಮಾಡುತ್ತಿದ್ದಾರೆ ಗೊತ್ತೇ?

Update: 2017-04-12 11:27 IST

ಹೊಸದಿಲ್ಲಿ, ಎ.12: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ವಿಶೇಷ ತರಬೇತಿ ಪಡೆದ 551 ಕಮಾಂಡೋಗಳು ಪ್ರಸಕ್ತ ಝೆಡ್ ಪ್ಲಸ್ ಸುರಕ್ಷೆ ಪಡೆಯುತ್ತಿರುವ 14 ವಿಐಪಿಗಳಿಗೆ ರಕ್ಷಣೆಯೊದಗಿಸುತ್ತಿದ್ದಾರೆ ಎಂದು ಸರಕಾರ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದೆ. ಈ ಕಮಾಂಡೋಗಳು ರಕ್ಷಣೆ ನೀಡುತ್ತಿರುವ ನಾಯಕರಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಹಾಗೂ ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಸೇರಿದ್ದಾರೆ.

ಪ್ರತಿಯೊಬ್ಬ ವಿಐಪಿ ರಕ್ಷಣೆಯಲ್ಲಿ ಒಟ್ಟು 39 ಎನ್ ಎಸ್ ಜಿ ಕಮಾಂಡೋಗಳು ನಿರತರಾಗಿದ್ದು, ಅವರು ದಿನದ 24 ಗಂಟೆಯೂ ನಾಯಕರಿಗೆ ರಕ್ಷಣೆಯೊದಗಿಸುತ್ತಾರೆ ಎಂದು ಗೃಹ ಖಾತೆಯ ಸಹಾಯಕ ಸಚಿವ ಗಂಗಾರಾಂ ಆಹಿರ್ ಹೇಳಿದ್ದಾರೆ.

ಕಾರ್ಗಿಲ್ ಯುದ್ಧದ ನಂತರ 2002ರಲ್ಲಿ ರಚಿತವಾದ ರಾಷ್ಟ್ರೀಯ ಸುರಕ್ಷೆ ಸಂಬಂಧಿಸಿದ ಸಚಿವರ ತಂಡವೊಂದು ತನ್ನ ವರದಿಯಲ್ಲಿ ಅತ್ಯುನ್ನತ ತರಬೇತಿ ಪಡೆದಿರುವ ಬ್ಲ್ಯಾಕ್ ಕ್ಯಾಟ್ ಸಿಬ್ಬಂದಿಯೂ ಸೇರಿದಂತೆ ಎನ್ ಎಸ್ ಜಿ ಕಮಾಂಡೋಗಳನ್ನು ವಿಐಪಿಗಳ ರಕ್ಷಣೆಯ ಕಾರ್ಯದಿಂದ ಹಿಂಪಡೆದು ಅವರ ಸ್ಥಾನದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯನ್ನು ನೇಮಿಸಬೇಕೆಂದು ಹೇಳಿದ್ದರೂ ಈ ಶಿಫಾರಸು ಇಲ್ಲಿಯ ತನಕ ಜಾರಿಯಾಗಿಲ್ಲ.

ಸಚಿವರು ನೀಡಿದ ಮಾಹಿತಿಯಂತೆ ಇಲ್ಲಿಯ ತನಕ ಒಟ್ಟು 298 ವಿಐಪಿಗಳಿಗೆ ಕೇಂದ್ರವು ರಕ್ಷಣೆಯೊದಗಿಸುತ್ತಿದ್ದು ಇವರಲ್ಲಿ 26 ಮಂದಿಗೆ ಝೆಡ್ ಪ್ಲಸ್ ರಕ್ಷಣೆ ನೀಡಲಾಗುತ್ತಿದ್ದರೆ, 58 ಮಂದಿಗೆ ಝೆಡ್ ರಕ್ಷಣೆ, 144 ಮಂದಿಗೆ ವೈ ಪ್ಲಸ್ ರಕ್ಷಣೆ, ಇಬ್ಬರಿಗೆ ವೈ ಹಾಗೂ 68 ಮಂದಿಗೆ ಎಕ್ಸ್ ವಿಭಾಗದ ರಕ್ಷಣೆಯೊದಗಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News